ಈ ವರ್ಷ ಅಧಿಕಾರಕ್ಕೆ ಬಂದ ತೆಲಂಗಾಣದ ಕಾಂಗ್ರೆಸ್ ಸರ್ಕಾರ, ತನ್ನ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದೆ. 2024- 25ನೇ ಸಾಲಿನ 2.91 ಲಕ್ಷ ಕೋಟಿ ರೂ ಗಾತ್ರದ ಬಜೆಟ್‌ನಲ್ಲಿ ಆರು ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ತೆಲಂಗಾಣ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಮಲ್ಲುಭಟ್ಟಿ ವಿಕ್ರಮಾರ್ಕ ಅವರು ಬಜೆಟ್ ಮಂಡನೆ ಮಾಡಿದರು.
ಗ್ಯಾರಂಟಿ ಯೋಜನೆಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ನೆರೆ ರಾಜ್ಯ ತೆಲಂಗಾಣದಲ್ಲಿಯೂ ಚುನಾವಣೆ ವೇಳೆ ನೀಡಿದ್ದ ಆರು ಗ್ಯಾರಂಟಿಗಳ ಈಡೇರಿಕೆಗೆ ಕಾಂಗ್ರೆಸ್ ಸರಕಾರ ಒತ್ತು ನೀಡಿದೆ. ಗುರುವಾರ ಮಂಡನೆಯಾದ ಬಜೆಟ್‌ನಲ್ಲಿ ಈ ಯೋಜನೆಗಳಿಗೇ ಹೆಚ್ಚಿನ ಹಣ ಮೀಸಲಿಡಲಾಗಿದ್ದು, ಜೋತೆಗೆ ರೈತರಿಗೆ ಸಮಸ್ಯೆಯ ಸಾಲ ಮನ್ನಾ ಘೋಷಿಸಲಾಗಿದೆ.
ಹಣಕಾಸು ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಮಲ್ಲುಭಟ್ಟಿ ವಿಕ್ರಮಾರ್ಕ ಗುರುವಾರ 2024- 25ನೇ ಸಾಲಿನ 2.91 ಲಕ್ಷ ಕೋಟಿ ರೂ ಮೊತ್ತದ ಬಜೆಟ್ ಮಂಡಿಸಿದರು. ಇದು ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಮೊದಲ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. 2.20 ಲಕ್ಷ ಕೋಟಿ ಆದಾಯ ಹೊಂದಿದ್ದು ಹಾಗೂ 33,487 ಬಂಡವಾಳ ವೆಚ್ಚದ ಬಜೆಟ್ ಅನ್ನು ವಿಕ್ರಮಾರ್ಕ ಮಂಡಿಸಿದರು.
ರಾಜ್ಯದ ಮಹಿಳಾ ಸ್ವ ಸಹಾಯ ಸಂಘಗಳ 63 ಲಕ್ಷ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ‘ಇಂದಿರಾ ಮಹಿಳಾ ಶಕ್ತಿ ಯೋಜನೆ’ ಮೂಲಕ ಈ ಸಂಘಗಳಿಗೆ 1 ಲಕ್ಷ ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ. ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿದೆ. ”ಸಾಧ್ಯವಾಗುವ ತನಕ ಎಲ್ಲವೂ ಅಸಾಧ್ಯದಂತೆಯೇ ಇರುತ್ತದೆ” ಎಂಬ ನೆಲ್ಸೆನ್ ಮಂಡೇಲಾ ಅವರು ಹೇಳಿಕೆಯನ್ನು ಉಲ್ಲೇಖಿಸಿದ ಭಟ್ಟಿ ವಿಕ್ರಮಾರ್ಕ, ರೈತರಿಗೆ 2 ಲಕ್ಷ ರೂಪಾಯಿವರೆಗೆ ರೈತರಿಗೆ ಸಾಲ ಮನ್ನಾ ಘೋಷಿಸಿದರು. ”ಈ ವರ್ಷದಿಂದ ನಾವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಸೇರುತ್ತೇವೆ. ಅದರ ಪ್ರೀಮಿಯಂ ಅನ್ನು ರಾಜ್ಯ ಸರಕಾರವೇ ಭರಿಸಲಿದೆ,”ಎಂದು ಘೋಷಿಸಿದರು.
ವಿವಿಧ ವಲಯಕ್ಕೆ ಸಂಭದಿಸಿದ ವೆಚ್ಚಗಳು
ಕೃಷಿ ಮತ್ತು ಸಂಬಂಧಿತ ವಲಯ – 72,659 ಕೋಟಿ ರೂ.
ಮಹಾಲಕ್ಷ್ಮಿ ಮಹಿಳೆಯರಿಗೆ ಉಚಿತ ಸಾರಿಗೆ – 723 ಕೋಟಿ ರೂ.
ಗೃಹಜ್ಯೋತಿ – 2,418ಕೋಟಿ ರೂ.
ಪಿಡಿಎಸ್ – 3,836 ಕೋಟಿ ರೂ.
ಮಹಿಳಾ ಶಕ್ತಿ ಕ್ಯಾಂಟೀನ್- 50 ಕೋಟಿ ರೂ.
ಹೈದರಾಬಾದ್ ಅಭಿವೃದ್ಧಿ – 10,000 ಕೋಟಿ ರೂ.
ಫೆಬ್ರವರಿಯಲ್ಲಿ ಹಿಂದಿನ ಬಿಆರ್‌ಎಸ್ ಸರ್ಕಾರವು 2.75 ಲಕ್ಷ ಕೋಟಿ ರೂ ಮೊತ್ತದ ಬಜೆಟ್ ಮಂಡಿಸಿತ್ತು. 2023- 24ರಲ್ಲಿ ಬಜೆಟ್ ಗಾತ್ರ 2.90 ಲಕ್ಷ ಕೋಟಿ ರೂ ಇತ್ತು. ರಾಷ್ಟ್ರೀಯ ಬೆಳವಣಿಗೆ ದರ ಶೇ 7.6ರಷ್ಟು ಇದ್ದರೆ, ತೆಲಂಗಾಣವು 2023- 24ರಲ್ಲಿ ಶೇ 7.4ರ ಬೆಳವಣಿಗೆ ದರ ಹೊಂದಿದೆ ಎಂದು ವಿಕ್ರಮಾರ್ಕ ತಿಳಿಸಿದ್ದಾರೆ.