ಗೋ ಮಾತೆ ನಂಬಿದವರಿಗೆ ಎಂದೂ ಯಾವುದೇ ಕಷ್ಟ ಬರಲ್ಲ. ಹೈನುಗಾರಿಕೆಯಿಂದ ಆರ್ಥಿಕವಾಗಿ ಸದೃಢರಾಗಿ ಒಳ್ಳಯ ಜೀವನ ಸಾಗಿಸಬಹುದು’ ಎಂದು ರಾಜ್ಯಸಭೆ ಸದಸ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದರು.
ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲಾ ಹಾಲು ಒಕ್ಕೂಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಹಯೋಗದಲ್ಲಿ ನಗರದ ಬಿ.ವಿ. ಭೂಮರಡ್ಡಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ವೀರೇಂದ್ರ ಹೆಗ್ಗಡೆ ಅವರ ಅನುದಾನದ ಅಡಿಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಿದ ಮೂಲಭೂತ ಸೌಕರ್ಯಗಳು ಮತ್ತು ಹೈನುಗಾರರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿ ಹೈನುಗಾರಿಕೆಯಿಂದ ಸಂಪತ್ತು, ನೆಮ್ಮದಿ ಸಿಗುತ್ತದೆ. ಎಲ್ಲ ರೀತಿಯ ಪ್ರಗತಿಗೆ ಸಹಕಾರಿಯಾಗುತ್ತದೆ. ನಮ್ಮ ಜಿಲ್ಲೆಯಂತೆ ಈ ಭಾಗ ಕೂಡ ಅಭಿವೃದ್ಧಿ ಹೊಂದಬೇಕು ಎನ್ನುವುದು ನಮ್ಮ ಆಶಯ ಆಗಿದೆ ಎಂದು ನುಡಿದ್ದರು.
ಪ್ರೀತಿಯಿಂದ ಹಸುಗಳನ್ನು ಪೋಷಿಸಬೇಕು. ತಾಯಿಯ ಹಾಲಿನಂತೆ ಜಾನುವಾರುಗಳ ಹಾಲು ಕೂಡ ಪವಿತ್ರವಾದುದು. ಗೋಮಾತೆ ನಂಬಿದವರಿಗೆ ಎಂದು ಕಷ್ಟ ಬಂದಿಲ್ಲ ಎಂದು ಹೇಳಿದರು.
ಬೀದರ್ ಜಿಲ್ಲೆ ಕೂಡ ಆರ್ಥಿಕವಾಗಿ ಬೆಳೆಯಬೇಕು. ಎಲ್ಲ ಧರ್ಮೀಯರು ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬಹುದು. ಹೆಚ್ಚಿನ ಹಾಲು ಉತ್ಪಾದನೆಯಿಂದ ಹೆಚ್ಚಿನ ಸಂಪತ್ತು ಗಳಿಸಬಹುದು. ಹೈನುಗಾರಿಕೆಯಲ್ಲಿ ಹೆಣ್ಣು ಮಕ್ಕಳಷ್ಟೇ ಅಲ್ಲ ಗಂಡು ಮಕ್ಕಳು ಕೂಡ ತೊಡಗಿಸಿಕೊಳ್ಳಬಹುದು. ಕೋವಿಡ್ ನಂತರ ಅನೇಕ ಗಂಡು ಮಕ್ಕಳು ನಗರಗಳನ್ನು ತೊರೆದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ ಎಂದು ತಿಳಿಸಿದರು.