ವಿಐಎಸ್‍ಎಲ್ ಕಾರ್ಖಾನೆ ಪುನರುಜ್ಜೀವನಕ್ಕೆ 15 ಸಾವಿರ ಕೋಟಿ ರೂ. ಅಗತ್ಯ : ಸಚಿವ ಕುಮಾರಸ್ವಾಮಿ

ವಿಐಎಸ್‍ಎಲ್ ಕಾರ್ಖಾನೆ ಪುನರುಜ್ಜೀವನಕ್ಕೆ 15 ಸಾವಿರ ಕೋಟಿ ರೂ. ಅಗತ್ಯ : ಸಚಿವ ಕುಮಾರಸ್ವಾಮಿ

ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕಷ್ಟವಾದರೂ ಉಳಿಸುತ್ತೇನೆ. ಕಾರ್ಮಿಕರ ಹಿತದೃಷ್ಟಿಯಿಂದ ಮತ್ತು ವಿಶ್ವೇಶ್ವರಯ್ಯನವರ ಹೆಸರು ಉಳಿಸಲು ವಿಐಎಸ್‍ಎಲ್ ಪುನರುಜ್ಜೀವನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನುಡಿದರು.

ಶಿವಮೊಗ್ಗನಗರದಲ್ಲಿ  ಮಾತನಾಡಿದ ಅವರು ಈ ಹಿಂದೆ ವಿಐಎಸ್‌ಎಲ್ ಮುಚ್ಚಬೇಕೆಂಬ ತೀರ್ಮಾನಕ್ಕೆ ಬರಲಾಗಿತ್ತು. ಸಾವಿರಾರು ಕುಟುಂಬಗಳಿಗೆ ಕಾರ್ಖಾನೆ ಅನ್ನ ಕೊಟ್ಟಿದೆ. ಅದನ್ನು ಉಳಿಸಲು ಎಷ್ಟು ಹೋರಾಟ ಮಾಡುತ್ತಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತಿದೆ. ಕಾರ್ಖಾನೆಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದೇನೆ. ಆರ್ಥಿಕ ಏರಿಳಿತ ಆಗಿರುವ ಕಂಪನಿಗಳನ್ನು ಖಾಸಗಿತನಕ್ಕೆ ಒಪ್ಪಿಸಬೇಕೆಂಬ ತೀರ್ಮಾನ ಆಗಿದೆ ಎಂದು ಹೇಳಿದರು.

ವಿಶಾಖಪಟ್ಟಣದ ರಾಷ್ಟ್ರೀಯ ಇಸ್ಪಾತ್ ನಿಗಮ್(ಆರ್‌ಎನ್‌ಐಎಲ್) ಕಾರ್ಖಾನೆಯ ಪರಿಸ್ಥಿತಿಯೂ ವಿಐಎಸ್‌ಎಲ್‌ಗೆ ಭಿನ್ನವಾಗಿಲ್ಲ. ಲಾಭದಲ್ಲಿದ್ದ ಆ ಕಾರ್ಖಾನೆ ಇಂದು ನಷ್ಟದಲ್ಲಿದೆ. ಅದರ ಅಭಿವೃದ್ಧಿಗೆ 35 ಸಾವಿರ ಕೋಟಿ ರೂ. ಅಗತ್ಯವಿದೆ. ಅದೇ ರೀತಿ ವಿಐಎಸ್‌ಎಲ್​ಗೆ ಕನಿಷ್ಠ 15 ಸಾವಿರ ಕೋಟಿ ರೂ. ಅಗತ್ಯವಿದೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿ ವಿಷಯಕ್ಕಿಂತ ಬೇರೆಯದ್ದೇ ವಿಷಯಗಳ ಬಗ್ಗೆ ಬರ್ಚೆ ಆಗುತ್ತಿದೆ. ಹಲವಾರು ಯೋಜನೆಯ ಜಾರಿಯಲ್ಲಿ ಲೋಪದೋಷಗಳಿವೆ. ಇಂತಹ ಪರಿಸ್ಥಿತಿ ಹಿಂದೆಂದೂ ಇರಲಿಲ್ಲ. ಆಡಳಿತ ಪಕ್ಷದ ಕೊನೆಯಲ್ಲಿ ಅದರ ಬಗ್ಗೆ ಟೀಕೆ ಟಿಪ್ಪಣಿ ಸಹಜ. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ ವರ್ಷ ಕಳೆಯುವ ಮೊದಲೇ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದೆ. ಹಿಂದಿನ ಸರ್ಕಾರದ ಮೇಲೆ ಕೇಳಿಬರುತ್ತಿದ್ದ ಶೇ.40ಗಿಂತ ಹೆಚ್ಚು ಭ್ರಷ್ಟಾಚಾರ ಈಗ ನಡೆಯುತ್ತಿದೆ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

Share this post

Post Comment