ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಗ್ರಾಮೀಣ ಪುರ‍್ರಚನೆಗೆ ಹಗಲಿರುಳು ಚಿಂತಿಸಿ ಶ್ರಮಿಸಿದ ಮಹಾತ್ಮಾ ಗಾಂಧೀಜಿಯವರ ಆಶಯದ ಗ್ರಾಮೀಣ ಪುರ‍್ರಚನೆಯ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ೧೯೬೯ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿ ಯುವಜನರಿಗೆ ಗ್ರಾಮೀಣ ಜನರೊಂದಿಗೆ ಬೆರೆತು ಅಲ್ಲಿನ ಸಂಸ್ಕೃತಿಯನ್ನು ಮತ್ತು ಸಮಸ್ಯೆಗಳನ್ನು ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ರಾಜ್ಯಶಾಸ್ತç ಅಧ್ಯಾಪಕ ಗಂಗಣ್ಣ ಹೊಸಮನಿ ಅಭಿಪ್ರಾಯಪಟ್ಟರು.
ರಸ್ತಾಪುರ ಗ್ರಾಮದಲ್ಲಿ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಎನ್.ಎಸ್.ಎಸ್. ‘ಎ’ ಮತ್ತು ‘ಬಿ’ ಘಟಕಗಳ ವತಿಯಿಂದ ಹಮ್ಮಿಕೊಂಡ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ನುಡಿಗಳನ್ನಾಡಿದ ಅವರು ಎನ್.ಎಸ್.ಎಸ್. ಮೂಲಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮುಂದಿನ ತಮ್ಮ ಸಾಮಾಜಿಕ ಬದುಕಿನ ರೀತಿನೀತಿಗಳನ್ನು ಕಲಿಯುವುದರ ಜೊತೆಗೆ ಸೇವಾ ಮನೋಭಾವನೆ, ಪರಸ್ಪರರ ಅರ್ಥೈಸುವ, ಗೌರವಿಸುವ, ಸಮಸ್ಯೆಗಳಿಗೆ ಸ್ಪಂಧಿಸುವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹಲವಾರು ನಿರ್ದೇಶನಗಳ ಮೂಲಕ ತಿಳಿಸಿದರು.
ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಶಿವಲಿಂಗಣ್ಣ ಸಾಹು ಮಾತನಾಡಿ ಎನ್.ಎಸ್.ಎಸ್. ಘಟಕದ ಮೂಲಕ ಪ್ರಜಾಪ್ರಭುತ್ವ ಮನೋಭಾವ, ಸಹಿಷ್ಣುತೆ ಮನೋಭಾವನೆ, ಸಮಯ ಪ್ರಜ್ಞೆ, ಸಾಮಾಜಿಕ ಜವಾಬ್ದಾರಿ, ಶಿಸ್ತು, ಧನಾತ್ಮಕ ಚಿಂತನೆ ಮುಂತಾದವುಗಳ ಕುರಿತು ತರಬೇತಿ ಪಡೆದುಕೊಂಡಿರುವ ವಿದ್ಯಾರ್ಥಿಗಳು ಇವೆಲ್ಲವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ದೇವಿಂದ್ರಪ್ಪ ಆಲ್ದಾಳ, ಸಂಗಣ್ಣ ದಿಗ್ಗಿ, ಸತೀಶ ತುಳೇರ, ಮಾನಯ್ಯ ಗೌಡಗೇರಾ ಹಾಗೂ ಎನ್.ಎಸ್.ಎಸ್. ‘ಎ’ ಘಟಕ ಅಧಿಕಾರಿ ರಾಘವೇಂದ್ರ ಹಾರಣಗೇರಾ, ಎನ್.ಎಸ್.ಎಸ್. ‘ಬಿ’ ಘಟಕ ಅಧಿಕಾರಿ ಭೀಮಪ್ಪ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ವಿವಿಧ ಕೌಶಲ್ಯಗಳ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ನಂತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಬಿರದ ವಿದಾಯ ಗೀತೆಯೊಂದಿಗೆ ಎನ್.ಎಸ್.ಎಸ್. ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿತು.