ಕಲ್ಯಾಣ ಕರ್ನಾಟಕದ ನಾಲ್ಕು ಹೋರಾಟಗಳನ್ನು ಹೊಸ ತಲೆಮಾರು ಮರೆಯಬಾರದು: ಸಿಎಂ ಸಿದ್ದರಾಮಯ್ಯ

ಕಲ್ಯಾಣ ಕರ್ನಾಟಕದ ನಾಲ್ಕು ಹೋರಾಟಗಳನ್ನು ಹೊಸ ತಲೆಮಾರು ಮರೆಯಬಾರದು: ಸಿಎಂ ಸಿದ್ದರಾಮಯ್ಯ

ನ್ಯೂಸ್‌ ಡೆಸ್ಕ್‌ ಉತ್ತರ ಕರ್ನಾಟಕ:  ಕಲ್ಯಾಣ ಕರ್ನಾಟಕವು ನಾಲ್ಕು ಮಹತ್ವದ ಹೋರಾಟಗಳನ್ನು ಮಾಡಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ, ಕನ್ನಡ ಭಾಷಿಕರು ಒಗ್ಗೂಡುವ ಭಾಷಾವಾರು ಪ್ರಾಂತ್ಯ ರಚನೆಯ ಹೋರಾಟ ಮತ್ತು ಆರ್ಟಿಕಲ್ 371 ಜೆ ರಚನೆಗಾಗಿ ನಡೆದ ಚಳುವಳಿ. ಇವುಗಳನ್ನು ಹೊಸ ತಲೆಮಾರು ಎಂದಿಗೂ ಮರೆಯಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ರಾಷ್ಟ್ರಧ್ವಜಾರೋಹಣ ನೇರವೇರಿಸಿದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ವಿಧಿ ಜಾರಿಯ ದಶಮಾನೋತ್ಸವದ ಈ ಮಹತ್ವದ ಸಂದರ್ಭದಲ್ಲಿ ಸಮಸ್ತ ಜನತೆಗೆ ಹೃತ್ಪೂರ್ವಕ ಶುಭಾಶಯಗಳು. ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಈ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಅವಕಾಶ ಲಭಿಸಿದ್ದು ಧನ್ಯತೆಯ ಭಾವ ಮೂಡಿಸಿದೆ. ಹಾಗೂ ಈ ಭಾಗದ ಅಭಿವೃದ್ಧಿಯ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿದೆ ಎಂದು ಹೇಳಿದರು.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ ಮೊದಲಾದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಈ ಪ್ರದೇಶ ವಿಶ್ವವೇ ನಿಬ್ಬೆರಗಾಗುವಂತಹ ಸಾಮಾಜಿಕ ಕ್ರಾಂತಿಗೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮಾದರಿ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ ಪವಿತ್ರ ಭೂಮಿಯಾಗಿದೆ. ಶರಣರ ಚಳುವಳಿಗೆ ಬಸವಣ್ಣನವರು ಮುಂದಾಳತ್ವ ವಹಿಸಿದ್ದರು. ಬಸವ ತತ್ವದಲ್ಲಿ ನಂಬಿಕೆ ಇಟ್ಟು ಮನ್ನಡೆಯುತ್ತಿರುವ ನಮ್ಮ ಸರ್ಕಾರ ‘ವಿಶ್ವಗುರು ಬಸವಣ್ಣ – ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಿದೆ. ಕಲ್ಯಾಣ ಚಾಲುಕ್ಯರು, ಬಹಮನಿ ಸುಲ್ತಾನರು, ರಾಷ್ಟ್ರಕೂಟರ ಆಳ್ವಿಕೆಯ ಭವ್ಯ ಪರಂಪರೆ ಹೊಂದಿದ ಪ್ರದೇಶ ಇದಾಗಿದೆ.

ಈ ವರ್ಷ ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ರೈತರಲ್ಲೂ ಸಂತಸದ ಭಾವನೆ ನೆಲೆಸಿದೆ. ಪ್ರಕೃತಿ ಕೂಡ ನಮ್ಮನ್ನು ಆಶೀರ್ವದಿಸಿದೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಬೆಳಕು ಬಂದಿದ್ದು ಒಂದು ವರ್ಷದ ನಂತರ. ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನಗಳ ಫಲವಾಗಿ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲರ ಸಂಕಲ್ಪಶಕ್ತಿ, ಜವಾಹರ್ ಲಾಲ್ ನೆಹರು ಅವರ ದೂರದೃಷ್ಟಿಯ ಫಲವಾಗಿ ಕಲ್ಯಾಣ ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಮುಕ್ತವಾಗಿ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಹಾಗಾಗಿ ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ ಎಲ್ಲ ಮಹನೀಯರನ್ನು ನಾನು ಈ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.

ಒಂದು ಕಾಲಕ್ಕೆ ಬೌದ್ಧ ಧರ್ಮವನ್ನು ಪೋಷಿಸಿದ್ದ ಈ ನೆಲ 12 ನೇ ಶತಮಾನದ ಹೊತ್ತಿಗೆ ಇಡೀ ಜಗತ್ತಿನಲ್ಲಿಯೆ ಅಭೂತ ಪೂರ್ವವಾದ ಪ್ರಜಾಪ್ರಭುತ್ವದ ಆಶಯಗಳನ್ನು ಹುಟ್ಟು ಹಾಕಿತು. ಈ ಭಾಗವು ಹಲವು ಧರ್ಮಗಳ ನೆಲೆವೀಡಾಗಿದೆ. ಎಲ್ಲ ಧರ್ಮಗಳು ಸಾಮರಸ್ಯದಿಂದ ಒಟ್ಟುಗೂಡಿ ಬದುಕುವ ಮೂಲಕ ಇಡೀ ದೇಶಕ್ಕೆ ನಾವು ಮಾದರಿ ಎಂದು ಕಲ್ಯಾಣ ಕರ್ನಾಟಕದ ಜನ ಸಾರಿ ಹೇಳುತ್ತಿದ್ದಾರೆ. ಹಾಗಾಗಿ ಈ ಭಾಗದ ಜನ ನಮಗೆ ಸದಾ ಮಾದರಿ. ಬಸವ ಕಲ್ಯಾಣದಲ್ಲಿ ಹೊತ್ತಿಕೊಂಡ ಶರಣರ ಚಳುವಳಿಯು ಇಡೀ ಉಪಖಂಡದ ಬೇರೆ ಬೇರೆ ಭಾಗಗಳಿಂದ ಸಮಾನತಾವಾದಿ ಆಶಯಗಳನ್ನು ಹೊಂದಿದ್ದ ಜನರನ್ನು ಒಟ್ಟುಗೂಡಿಸಿತು. ಜಾತಿ, ವರ್ಗ, ವರ್ಣ, ಲಿಂಗ ತಾರತಮ್ಯವಿಲ್ಲದ ಸಮ-ಸಮಾಜ ನಿರ್ಮಾಣದ ಆಶಯವನ್ನು ತಾತ್ಕಾಲಿಕವಾಗಿಯಾದರೂ ಈಡೇರಿಸಿತ್ತು. ಶರಣರ ವಚನ ಚಳುವಳಿಯು ಇವತ್ತಿಗೂ ಕೂಡ ಸಮಾನತಾವಾದಿ ಆಶಯಗಳನ್ನು ಹೊತ್ತ ಜನರಿಗೆ ಪ್ರೇರಣೆಯಾಗಿದೆ. ಆ ನಂತರ ಬ್ರಿಟೀಷರ ವಿರುದ್ಧ ಸೆಟೆದೆದ್ದು ನಿಂತ ಸುರಪುರದ ರಾಜಾ ವೆಂಕಟಪ್ಪ ನಾಯಕ ಮುಂತಾದವರು ಇತಿಹಾಸದಲ್ಲಿ ಶಾಶ್ವತವಾಗಿ ನಿಲ್ಲುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಲ್ಯಾಣ ಕರ್ನಾಟಕವು ರಾಜ್ಯದ ಬೇರೆ ಬೇರೆ ಭಾಗಗಳ ಜನರಿಗಿಂತ ಒಂದು ಕೈ ಹೆಚ್ಚೆ ಎಂಬಂತೆ ಹೋರಾಟ ಮಾಡಿದೆ.

ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ ‘ಕವಿರಾಜ ಮಾರ್ಗ’ ನೀಡಿದ ಅಮೋಘವರ್ಷ ನೃಪತುಂಗನ ನಾಡು ಇದಾಗಿದೆ. ಸೂಫಿ-ಸಂತರ ಈ ಬೀಡು, ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ದೇಶದ ವಿವಿಧ ಪ್ರಾಂತ್ಯಗಳು ಜಾತಿ-ಲಿಂಗ ಅಸಮಾನತೆ, ಊಳಿಗಮಾನ್ಯತೆ ಮುಂತಾದ ಸಮಸ್ಯೆಗಳಲ್ಲಿ ಮುಳುಗಿದ್ದಾಗ ಕಲ್ಯಾಣ ಕರ್ನಾಟಕವು ದೀಪ ಹಚ್ಚಿ ದಾರಿ ತೋರುವ ಕೈಮರದಂತೆ ಕೆಲಸ ಮಾಡಿದೆ ಎಂದು ಹೇಳಿದರು.

Share this post

Post Comment