ಕಲಬುರಗಿ ನ್ಯೂಸ್ ರೌಂಡಪ್
1. ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಶಾಂತಿ ದಿನಾಚರಣೆ
ಅಂತರಾಷ್ಟ್ರೀಯ ಶಾಂತಿ ದಿನದ ಪ್ರಯುಕ್ತ ಕಲಬುರಗಿ ನಗರದಲ್ಲಿ ವಾಕಥಾನ್ ಜಾಥಾ ಏರ್ಪಡಿಸಲಾಗಿತ್ತು. ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಶಾಂತಿಯ ಸಂದೇಶವನ್ನು ಸಾರಿದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಏರ್ಪಡಿಸಲಾದ ವಾಕಥಾನ್ ಜಾಥಾ ನಗರದ ಜಗತ್ ವೃತ್ತದಿಂದ ಆರಂಭವಾಗಿ ನಗರದ ವಿವಿಧ ಬೀದಿಯಲ್ಲಿ ಸಂಚರಿಸಿ ಎಸ್‌ವಿಪಿ ವೃತ್ತದಲ್ಲಿ ಮುಕ್ತಾಯಗೊಂಡಿತು. ಕಾಲ್ನಡಿಗೆಯಲ್ಲಿ ಅನೇಕ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅಂತರಾಷ್ಟ್ರೀಯ ಶಾಂತಿ ದಿನದ ಸಂದೇಶವನ್ನು ಎಲ್ಲೆಡೆ ಹಬ್ಬಿದರು.
2. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವಂತೆ ಒತ್ತಾಯಿಸಿ ಪ್ರತಿಭಟನೆ
ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವಂತೆ ಆಗ್ರಹಿಸಿ ನಗರದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು. ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಸಂಚಾಲಕರಾದ ಶಾಂತಾ ಘಂಟೆ ಅವರ ನೇತೃತ್ವದಲ್ಲಿ ನಗರದ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಿದ ಮಹಿಳೆಯರು, ಕೆಲಸದ ಸ್ಥಳದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ನಿರಂತರ ತಾರತಮ್ಯವನ್ನು ತೊಲಗಿಸುವಂತೆ ಆಗ್ರಹಿಸಿದ್ದರು.
3.ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿದ ನಾಯಿ ಕಡಿತ ಪ್ರಕರಣಗಳು
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪ್ರತಿದಿನ ಬೀದಿ ನಾಯಿ ಕಡಿತ ಪ್ರಕರಣಗಳು ನಡೆಯುತ್ತಲೇ ಇವೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಜಾಣ ಮೌನವಹಿಸಿದ್ದಾರೆ. ಬಡಾವಣೆಯಲ್ಲಿ ಎಲ್ಲಿ ನೋಡಿದರೂ ಬೀದಿನಾಯಿಗಳ ಹಿಂಡು ಕಾಣಸಿಗುವುದು ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶಗಳನ್ನು ಗಮನಿಸಿದಾಗ 2022ರಲ್ಲಿ 2,105, 2023ರಲ್ಲಿ 1,447, 2024ರ ಆಗಸ್ಟ್ ಅಂತ್ಯದವರೆಗೆ 1,705 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.
4. ಜೈಲು ಸಿಬ್ಬಂದಿಯಿಂದಲ್ಲೆ ಕಾರಾಗೃಹದಲ್ಲಿ ಗಾಂಜಾ ಸಪ್ಲೈ..!
ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕಸಗುಡಿಸುವ ಮಹಿಳಾ ಸಿಬ್ಬಂದಿಯೊಬ್ಬರು ಖೈದಿಗಳಿಗೆ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪದಡಿ ಫರಹತಾಬಾದ್ ಠಾಣೆಯ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲಾ ಕೇಂದ್ರ ಕಾರಾಗೃಹದ ಡಿ ಗ್ರೂಪ್ ಸಿಬ್ಬಂದಿ ಪದ್ಮಾವತಿ ಎಂಬವರು ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಕಾರಾಗೃಹದ ಪ್ರವೇಶ ದ್ವಾರದಲ್ಲಿ ಭದ್ರತಾ ಪಡೆಯ ಸಿಬ್ಬಂದಿಗಳು ಪದ್ಮಾವತಿ ಅವರ ಬ್ಯಾಗ್ ತಪಾಸಣೆಗೊಳಪಡಿಸಿದಾಗ ಕರವಸ್ತ್ರದಿಂದ ಸುತ್ತಿದ ಉಂಡೆ ಆಕಾರದ ಅನುಮಾನಾಸ್ಪದ ವಸ್ತು ಕಂಡು ಬಂದಿದೆ. ಈ ಬಗ್ಗೆ ಭದ್ರತಾ ಸಿಬ್ಬಂದಿಗಳು ತಪಾಸಣೆ ಮಾಡಿದಾಗ 100 ಗ್ರಾಂ ಗಾಂಜಾ ಪತ್ತೆಯಾಗಿದೆ.
5. ಅದ್ದೂರಿಯಾಗಿ ಜರುಗಿದ ಸುಲಫಲ ಶ್ರೀ ಪಟ್ಟಾಧಿಕಾರ ದಶಮಾನೋತ್ಸವ
ಶಹಾಬಾಜಾರ್ ಬಡಾವಣೆಯಲ್ಲಿರುವ ಸುಲಫಲ ಮಠದಲ್ಲಿ ಏರ್ಪಡಿಸಲಾಗಿದ್ದ ಲಿಂಗೈಕ್ಯ ಪೂಜ್ಯ ಶ್ರಿ ಚನ್ನವೀರ ಶಿವಯೋಗಿಗಳ 70ನೇ ವರ್ಷದ ಪುಣ್ಯಸ್ಮರಣೆ ಮತ್ತು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ ದಶಮಾನೋತ್ಸವ, ಹಾಗೂ ಮಹಾದ್ವಾರ ಉದ್ಘಾಟನೆ ಸಮಾರಂಭವು ಅದ್ದೂರಿಯಾಗಿ ಜರುಗಿತು.
ಮಠದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭವನ್ನು ವೇದಿಕೆ ಮೇಲಿನ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮಾರಂಭದಲ್ಲಿ ನಾಲವಾರದ ಡಾ.ತೋಟೇಂದ್ರ ಮಹಾಸ್ವಾಮಿಗಳಿಗೆ ಹಾಗೂ ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
6.ರಾಜ್ಯದಲ್ಲಿ ಕೋಮುಗಲಭೆ ಹೆಚ್ಚಾಗಿದೆ:ಪ್ರತಾಪ್ ಸಿಂಹ
ಸಿದ್ದರಾಮಯ್ಯ ಸಿಎಂ ಆಗಿ ಬಂದಾದ ಮೇಲೆ ಕೊಮುಗಲಭೆ, ದಂಗೆ ಹೊರತಾಗಿ ಬೇರೆ ನಿರೀಕ್ಷೆ ಇಲ್ಲಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚುತ್ತಿರುವ ವಿಚಾರದ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗ ಎಸ್ ಡಿ ಪಿ ಐ ಸಂಘಟನೆ ಮೇಲಿನ ಪ್ರಕರಣಗಳು ವಾಪಾಸ್ ಪಡೆದರು. ಕೇಸ್ ಗಳು ವಾಪಾಸ್ ಪಡೆದ ಬಳಿಕ ರಾಜ್ಯದಲ್ಲಿ ದಂಗೆ ಎಳುವಂತಾಯ್ತು ಮಲ್ಲಿಕಾರ್ಜುನ ಬಂಡೆಯಂತ ಪೊಲೀಸ್ ಅಧಿಕಾರಿಗಳ ಕೊಲೆಯಾದವು ಎಂದು ಕಿಡಿಕಾರಿದರು.
7. ಕಲಬುರಗಿಯಲ್ಲಿ ಮಳೆ, ಮೋಡ ಕವಿದ ವಾತಾವರಣ
ಕಲಬುರಗಿ ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಅಲ್ಪ ಮಟ್ಟಿಗೆ ಮಳೆ ಸುರಿದಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಅಲ್ಲಲ್ಲಿ ಮಳೆ ನೀರು ರಸ್ತೆ ಮೇಲೆ ನಿಂತ್ತಿದ್ದರಿಂದ ಸಾರ್ವಜನಿಕರು, ವಾಹನ ಸವಾರರು ಪರದಾಟ ನಡೆಸಿದ ದೃಶ್ಯಗಳು ಕಂಡುಬಂದವು. ಹವಮಾನ ಇಲಾಖೆ ವರದಿಯಂತೆ ಕಲಬುರಗಿಯಲ್ಲಿ ಕಳೆದ ರಾತ್ರಿಯಿಂದ ಮಳೆ ಸುರಿಯುತ್ತಿದ್ದು, ನಗರ ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳ್ಳಗೆಯಿಂದಲೆ ಮೋಡ ಕವಿದ ವಾತವರಣವಿದ್ದು, ತಂಪು ಗಾಳಿ ಬಿಸುತ್ತಿರುವುದರಿಂದ ಜನ ಹೊರಬರಲು ಹೆದರುವಂತಾಗಿದೆ.
8.ಚಾಕುವಿನಿಂದ ಹಿರಿದು ಯುವಕನ ಬರ್ಬರ ಹತ್ಯೆ.!
ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ನಗರದ ಹೊರವಲಯದ ನಾಗನಹಳ್ಳಿ ಬಳಿ ನಡೆದಿದೆ.
18ವರ್ಷದ ಸುಮೀತ್ ಕೊಲೆಯಾದ ಯುವಕನಾಗಿದ್ದು, ಸಮೀತ್ ಸಹೋದರ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ, ಇದೆ ವಿಚಾರಕ್ಕೆ ಗಲಾಟೆ ಉಂಟಾಗಿ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೋಲಿಸರು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
9. ನೀಲೂರು ಗ್ರಾಮಕ್ಕೆ ಅಧಿಕಾರಿಗಳ ಭೇಟಿ
ನಿಮ್ಮ ಉತ್ತರ ಕರ್ನಾಟಕ ಸುದ್ದಿ ವಾಹಿನಿಯು ಜನಪರ ಕೆಲಸ ಮಾಡುವುದರ ಜೊತೆಗೆ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ನಿರಂತರವಾಗಿ ಮಾಡುತ್ತಲೆ ಇದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ನೀಲೂರು ಗ್ರಾಮದಲ್ಲಿ ಎರಡು ಕೋಟಿ ವೆಚ್ಚದಲ್ಲಿ ಜಲ್ ಜೀವನ್ ಮಿಷನ್ ಕಾಮಗಾರಿಯನ್ನು ಮಾಡಲಾಗಿತ್ತು. ಆದರೆ ಗ್ರಾಮದ ಹಲವು ಮನೆಗಳಿಗೆ ಇನ್ನೂ ಸಹ ಹನಿ ನೀರು ಬಾರದ ಹಿನ್ನಲೆ ಗ್ರಾಮಸ್ಥರು ಕಿಲೋಮೀಟರ್ ದೂರ ಸಂಚರಿಸಿ ನೀರನ್ನು ತರುವಂತ ಪರಿಸ್ಥಿತಿ ಎದುರಾಗಿತ್ತು.
ಇದನ್ನು ಗಮನಿಸಿದ ನಿಮ್ಮ ಉತ್ತರ ಕರ್ನಾಟಕ ನ್ಯೂಸ್ ಈ ಕುರಿತು “ನೀಲೂರು ಜನರ ನೀರಿನ ದಾಹ ತೀರಿಸುವರು ಯಾರು..?” ಎಂಬ ಶೀರ್ಷಿಕೆಯ ಅಡಿ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಇದೀಗ ಗ್ರಾಮಕ್ಕೆ ಭೇಟಿ ನೀಡಿ ಸರ್ವೆ ನಡೆಸಿ,ನೀರು ಪೂರೈಕೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ .
10. ರಸ್ತೆ ಒಳಗಡೆ ಸಿಕ್ಕಿಬಿದ್ದ ಲಾರಿ,ಸಾರ್ವಜನಿಕರ ಅಕ್ರೋಶ
ಕಲ್ಬುರ್ಗಿ ನಗರದ ಹೃದಯ ಭಾಗವಾಗಿರುವ ಅನ್ನಪೂರ್ಣ ಕ್ರಾಸ್ ಹತ್ತಿರ ರಸ್ತೆ ಒಳಗಡೆ ಲಾರಿ ಸಿಕ್ಕಿಬಿದ್ದಿರುವಾಗ ಘಟನೆ ನಡೆದಿದೆ.
ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಕಲ್ಬುರ್ಗಿಯಲ್ಲಿ ಅನೇಕ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿತ್ತು ಅದೇ ರೀತಿಯಾಗಿ ಅನ್ನಪೂರ್ಣ ಕ್ರಾಸ್ ಹತ್ತಿರವೂ ಕೂಡ ಡಾಂಬರೀಕರಣ ಮಾಡಲಾಗಿತ್ತು ಆದರೆ ಡಾಂಬರೀಕರಣ ಸರಿಯಾಗಿ ಮಾಡದೆ ಇರುವ ಹಿನ್ನೆಲೆಯಲ್ಲಿ ಇಂದು ಲಾರಿ ಸಿಕ್ಕಿಬಿದ್ದು ಚಾಲಕ ಮತ್ತು ನಿರ್ವಾಹಕರು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು,ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ವರದಿ : ಶ್ರೀಕಾಂತ್ ಬಿರಾಳ್ ,ಕಲಬುರಗಿ