ಊತ್ತರ ಕರ್ನಾಟಕ ನ್ಯೂಸ್ ಡೆಸ್ಕ್ ಬೀದರ್: ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ, ಉಡುಪಿ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಹೈಕಮಾಂಡ್ ಜೊತೆ ಚರ್ಚಿಸಿ, ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ನೀಡುವ ನಿರ್ಣಯವನ್ನು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಕೋರ್ ಕಮಿಟಿ ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ, ಮುಂಬರುವ ಉಪಚುನಾವಣೆಗಳ ಸಂಬಂಧ ವಿಸ್ತೃತ ಸಭೆ ಮಾಡಲಾಗಿದೆ. ಚನ್ನಪಟ್ಟಣ, ಸಂಡೂರು, ಹಾವೇರಿ ಕ್ಷೇತ್ರದ ಬಗ್ಗೆ ಚರ್ಚೆಯಾಗಿದೆ. ಗೆಲ್ಲುವ ವಿಚಾರವಾಗಿ, ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ಇದರ ಜೊತೆ ರಾಜ್ಯದ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಭ್ರಷ್ಟಾಚಾರ, ಗಣೇಶ ಚತುರ್ಥಿ, ಗಣೇಶ ನಿಮಜ್ಜನ, ಓಲೈಕೆ ರಾಜಕಾರಣ ಬಗ್ಗೆ ಚರ್ಚೆಯಾಗಿದೆ. ಸಂಘದ ಇತರೆ ಸಂಘಟನೆಗಳ ಜೊತೆ ಚರ್ಚಿಸಿ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ಮೈತ್ರಿ ಪಕ್ಷದ ಜೊತೆ ಚರ್ಚೆ ಮಾಡಿ ಬಳಿಕ ಕೇಂದ್ರೀಯ ಮಂಡಳಿಯಲ್ಲಿ ಚರ್ಚೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಚುನಾವಣೆ ಬರುತ್ತಿದೆ. ಅಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆಯಾಗಿದೆ. ಕೇಂದ್ರೀಯ ಸಮಿತಿ ಜೊತೆ ಚರ್ಚಿಸಿ, ನಿರ್ಣಯ ಕೈಗೊಳ್ಳಲು ರಾಜ್ಯಾಧ್ಯಕ್ಷರಿಗೆ ಅನುಮತಿ ನೀಡಿದ್ದೇವೆ ಎಂದು ತೀಳಿಸಿದರು.