ಭರ್ಜರಿ ಮೆರವಣಿಗೆಯ ಮೂಲಕ ಬಂದ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣ ಉಪ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ಶಕ್ತಿ ಪ್ರದರ್ಶನ ತೋರಿದ ನಿಖಿಲ್ ಕುಮಾರಸ್ವಾಮಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು, ಈ ವೇಳೆ ಸಾವಿರಾರು ಕಾರ್ಯಕರ್ತರು, ಮುಖಂಡರು ಸಾಥ್ ನೀಡಿದರು. ಪಟ್ಟಣದ ಶೇರು ಹೋಟೆಲ್ ವೃತ್ತದಿಂದ ಪ್ರಾರಂಭವಾದ ರೋಡ್ ಶೋ, ಸಾತನೂರು ವೃತ್ತದ ಬಳಿ ಇರುವ ಚುನಾವಣಾ ಅಧಿಕಾರಿ ಕಚೇರಿವರೆಗೆ ಅರ್ಧ ಕಿಲೋಮೀಟರ್ ದೂರದಷ್ಟು ನಡೆಯಿತು.
ಈ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸೇರಿದಂತೆ ಮೈತ್ರಿ ಪಕ್ಷಗಳ ನಾಯಕರು ಸಾಥ್ ನೀಡಿದರು. ರೋಡ್ ಶೋಗೂ ಮುಂಚೆ ನಿಖಿಲ್ ಅವರು, ಕೆಂಗಲ್ನಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದರು. ನಂತರ, ಅಲ್ಲಿಂದ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ನಿಖಿಲ್ ಅವರನ್ನು ಚನ್ನಪಟ್ಟಣದತ್ತ ಕರೆದೊಯ್ದರು.