ನೂರಾರು ಮರ ಕಡಿದ ‘ಟಾಕ್ಸಿಕ್‘ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದ್ದು, ಕಾನೂನು ಕ್ರಮಕ್ಕೆ ಸಚಿವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಎಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ.
ಸ್ಯಾಟೆಲೈಟ್ ಚಿತ್ರಗಳಿಂದ ಈ ಅಕ್ರಮ ಕೃತ್ಯವು ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ಮರ ಕಡಿಯಲು ಅರಣ್ಯಾಧಿಕಾರಿ ಅನುಮತಿ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ನಿಯಮ ಉಲ್ಲಂಘಿಸಿ ಅನುಮತಿ ನೀಡಿದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಒಂದು ವೇಳೆ ಅನುಮತಿ ಇಲ್ಲದೇಯೇ ಮರ ಗಿಡ ಕಡಿದಿದ್ದರೆ ಅದಕ್ಕೆ ಕಾರಣರಾದವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸಚಿವರು ಆದೇಶ ಹೊರಡಿಸಿದ್ದಾರೆ.