ಇಸ್ಲಾಂ ಧರ್ಮದ ಆಚರಣೆ ಮತ್ತು ಸಂಪ್ರದಾಯದ ಭಾಗವಾಗಿ ಹೆಚ್ಚಿನ ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ಬುರ್ಖಾ ಧರಿಸಿ ಹೋಗುತ್ತಾರೆ. ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿಯೇ ಓಡಾಡುತ್ತಾರೆ.
ಆದ್ರೆ ಫ್ರಾನ್ಸ್, ಚೀನಾ, ಡೆನ್ಮಾರ್ಕ್, ಬಲ್ಗೇರಿಯಾ, ಆಸ್ಟ್ರೀಯಾ, ಬೆಲ್ಜಿಯಮ್ ಇತ್ಯಾದಿ ದೇಶಗಳು ಸಾರ್ವಜನಿಕ ಸ್ಥಳಗಳಲ್ಲಿ ಕಣ್ಣು, ಮೂಗು, ಬಾಯಿ ಮುಖವನ್ನು ಮುಚ್ಚುವ ಬುರ್ಖಾ ಧರಿಸಿ ಓಡಾಡುವುದಕ್ಕೆ ನಿಷೇಧವನ್ನು ಹೇರಿವೆ.
ಇದೀಗ ಈ ಪಟ್ಟಿಗೆ ಸ್ವಿಟ್ಜರ್ಲ್ಯಾಂಡ್ ದೇಶವೂ ಕೂಡಾ ಸೇರ್ಪಡೆಯಾಗಿದೆ. ಹೌದು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವಂತಿಲ್ಲ ಎಂಬ ಕಠಿಣ ಕಾನೂನು ಕ್ರಮವನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರವು ಜಾರಿಗೊಳಿಸಿದೆ.
ಸ್ವಿಟ್ಜರ್ಲ್ಯಾಂಡ್‌ನ ಬಲಪಂಥೀಯ ಆಡಳಿತದ ಪೀಪಲ್ಸ್ ಪಾರ್ಟಿ ಬುರ್ಖಾ ಬ್ಯಾನ್ ಮಾಡಲು ಸ್ವಿಸ್ ಸಂಸತ್ ಮೇಲ್ಮನೆಯಲ್ಲಿ ಅಂಗೀಕಾರ ಪಡೆದಿತ್ತು. ಅಲ್ಲದೆ 2021 ರ ಜನಾಭಿಪ್ರಾಯ ಸಂಗ್ರಹಣೆಯಲ್ಲಿಯೂ ಬಹು ಸಂಖ್ಯೆಯ ಜನರು ಬುರ್ಖಾ ನಿಷೇಧದ ಪರವಾಗಿ ಓಟ್ ಹಾಕಿದ್ದರು.
ಹೌದು ಬುರ್ಖಾ ಮತ್ತು ಮುಖಗವಸುಗಳನ್ನು ನಿಷೇಧಿಸಬೇಕೆ ಎಂದು ಅಲ್ಲಿನ ಜನರಲ್ಲಿ ಕೇಳಿದಾಗ 51 ಪ್ರತಿಶತದಷ್ಟು ಜನರು ಬುರ್ಖಾ ನಿಷೇಧಕ್ಕೆ ಬೆಂಬಲ ನೀಡಿದ್ದರು. ಇನ್ನೂ ಸ್ವಿಟ್ಜರ್ಲ್ಯಾಂಡ್ ಸರ್ಕಾರದ ಈ ನಿರ್ಧಾರಕ್ಕೆ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು.
ಈ ಎಲ್ಲದರ ನಡುವೆಯೂ ಇದೀಗ ಇಲ್ಲಿನ ಸರ್ಕಾರ ಅಧೀಕೃತವಾಗಿ ಬುರ್ಖಾ ನಿಷೇಧದ ಕಾನೂನನ್ನು ಜಾರಿಗೊಳಿಸಿದೆ.
ಜನವರಿ 1, 2024 ರಿಂದ ಈ ಕಠಿಣ ನಿಯಮ ಜಾರಿಯಾಗಲಿದ್ದು, ನಿಯಮವನ್ನು ಉಲ್ಲಂಘಿಸಿದವರಿಗೆ 1,000 ಸ್ವಿಸ್ ಫ್ರಾಂಕ್ ಅಂದರೆ ಅಂದಾಜು 96,280 ರೂ. ದಂಡವನ್ನು ವಿಧಿಸಲಾಗುವುದು ಎಂಬ ಕಾನೂನನ್ನು ಸ್ವಿಟ್ಜರ್ಲ್ಯಾಂಡ್ ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದೆ.