ಮಾಜಿ ಸಿಎಂ HD ಕುಮಾರಸ್ವಾಮಿ, ಬೊಮ್ಮಾಯಿ, ತುಕಾರಾಂ ರಾಜೀನಾಮೆ.. ಬೈ ಎಲೆಕ್ಷನ್ ಯಾವಾಗ?

ಮಾಜಿ ಸಿಎಂ HD ಕುಮಾರಸ್ವಾಮಿ, ಬೊಮ್ಮಾಯಿ, ತುಕಾರಾಂ ರಾಜೀನಾಮೆ.. ಬೈ ಎಲೆಕ್ಷನ್ ಯಾವಾಗ?

ಯಾವ್ಯಾವ ಕ್ಷೇತ್ರಕ್ಕೆ ಮೂವರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.?
ನೂತನ ಕೇಂದ್ರ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ HDK
ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನೂತನ ಸಂಸದರು
18ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬೊಮ್ಮಾಯಿ ಹಾಗೂ ಇ.ತುಕಾರಾಂ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಈ ಬಾರಿ ಎಲೆಕ್ಷನ್ನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವತಿಯಿಂದ ಗೆಲುವು ಸಾಧಿಸಿದ್ದರು. ಬಳಿಕ ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೇಟ್ನಲ್ಲಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಹೆಚ್.ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ಕುಮಾರಸ್ವಾಮಿಯವರು ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಯುಟಿ ಖಾದರ್ ಅವರು ಕುಮಾರಸ್ವಾಮಿಯವರ ರಾಜೀನಾಮೆ ಪತ್ರವನ್ನು ಅಂಗೀಕಾರ ಮಾಡಿದ್ದಾರೆ.
ಬಿಜೆಪಿ ಲೋಕಸಭಾ ಸದಸ್ಯರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಕೆ ಮಾಡಿದರು. ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಸಂಸದರಾಗಿ ಈ ಬಾರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಆಯ್ಕೆ ಆಗಿದ್ದಾರೆ. ಹೀಗಾಗಿ ಶಿಗ್ಗಾವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಸ್ಪೀಕರ್ ಕಚೇರಿಗೆ ತೆರಳಿ ಅಲ್ಲಿ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಇನ್ನು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇ ತುಕಾರಾಂ ಅವರು ಭರ್ಜರಿ ಜಯ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಡೂರ್ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಇ ತುಕಾರಾಂ ಅವರು ರಾಜಿನಾಮೆ ನೀಡಿದ್ದಾರೆ. ಈ ಮೂಲಕ ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಶಾಸಕರು ರಾಜೀನಾಮೆ ನೀಡಿದ್ದು ಬೈಎಲೆಕ್ಷನ್ನಲ್ಲಿ ನೂತನ ಶಾಸಕರನ್ನು ಮತದಾರರು ಆಯ್ಕೆ ಮಾಡಲಿದ್ದಾರೆ. ಮುಂದಿನ 6 ತಿಂಗಳೊಳಗೆ 3 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಸಾಧ್ಯತೆ ಇದೆ.

Share this post

Post Comment