ಭಾಗ್ಯಲಕ್ಷ್ಮೀ ಯೋಜನೆಗೆ 18 ವರ್ಷ! ಅರ್ಹ ಬಾಲಕಿಯರ ಖಾತೆಗೆ ಬೀಳಲಿದೆ ಯೋಜನೆಯ 1 ಲಕ್ಷ ಹಣ

ಭಾಗ್ಯಲಕ್ಷ್ಮೀ ಯೋಜನೆಗೆ 18 ವರ್ಷ! ಅರ್ಹ ಬಾಲಕಿಯರ ಖಾತೆಗೆ ಬೀಳಲಿದೆ ಯೋಜನೆಯ 1 ಲಕ್ಷ ಹಣ

ಹದಿನೆಂಟು ವರ್ಷದ ಹಿಂದೆ ರಾಜ್ಯದಲ್ಲಿ ಆರಂಭಗೊಂಡಿದ್ದ ಭಾಗ್ಯಲಕ್ಷ್ಮೀ ಯೋಜನೆಯ ತಲಾ ಒಂದು ಲಕ್ಷ ರೂ. ಲಾಭವನ್ನು ಚಿತ್ರದುರ್ಗ ಜಿಲ್ಲೆಯ 1647 ಬಾಲಕಿಯರು ಪಡೆಯಲಿದ್ದಾರೆ.
ಜಿಲ್ಲೆಯಲ್ಲಿಈ ಯೋಜನೆಯಡಿ ನೋಂದಾಯಿಸಿ ಹದಿನೆಂಟು ವರ್ಷ ಪೂರ್ಣಗೊಂಡ ಏಪ್ರಿಲ್ ಮತ್ತು ಮೇ ತಿಂಗಳ ಅಂತ್ಯಕ್ಕೆ ಈ ಬಾಲಕಿಯರು ಯೋಜನೆಯ ಮೆಚ್ಯೂರಿಟಿ ಬೆನಿಫಿಷರ್ಗೆ ಅರ್ಹರಾಗಿದ್ದು, ಈ ಹಣ ಇನ್ನೆರಡು ತಿಂಗಳಲ್ಲಿಅರ್ಹ ಫಲಾನುಭಗಳ ಖಾತೆಗೆ ಆದ್ಯತೆ ಮೇರೆಗೆ ಜಮೆ ಆಗಲಿದೆ. ಈಗಾಗಲೇ ಅಗತ್ಯ ದಾಖಲೆಗಳನ್ನು ಇಲಾಖೆಯು ಪಡೆಯಲು ಮುಂದಾಗಿದೆ.

2006-07 ರಲ್ಲಿ ಲಿಂಗಾನುಪಾತ ಉತ್ತಮ ಪಡಿಸಲು, ಹೆಣ್ಣು ಭ್ರೂಣ ಹತ್ಯೆ ತಡೆಯಲು, ಬಾಲ್ಯ ವಿವಾಹ ಪದ್ಧತಿಗೆ ಬ್ರೇಕ್ ಹಾಕಲು, ಹೆಣ್ಣು ಮಗುವಿನ ಶಿಕ್ಷಣ, ಆರೋಗ್ಯ ಮಟ್ಟ ಉತ್ತಮ ಪಡಿಸಿ ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳಿಗೆ ಸರಕಾರವು ನಿಶ್ಚಿತ ಠೇವಣಿ ಹೂಡಿ, ಈ ಮಗುವಿಗೆ ಹದಿನೆಂಟು ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಪರಿಪಕ್ವ ಹಣ ನೀಡುವ ಸದುದ್ದೇಶದಿಂದ ಆರಂಭಗೊಂಡಿದ್ದ ಭಾಗ್ಯಲಕ್ಷ್ಮೀ ಯೋಜನೆಗೆ ಪ್ರಸ್ತುತವಾಗಿ ಹದಿನೆಂಟು ವರ್ಷವಾಗಿರುವ ಹಿನ್ನೆಲೆ ಎಲ್ಲ ತಾಲೂಕುಗಳ ಸಿಡಿಪಿಒ ಇಲಾಖೆಯು ಪರಿಪಕ್ವ ಹಣ ನೀಡಲು ಈಗಾಗಲೇ ಅರ್ಹರಿಂದ ಅರ್ಜಿ ಮತ್ತು ಅಗತ್ಯ ದಾಖಲೆ ಸಂಗ್ರಹಿಸುತ್ತಿದೆ.

ಈ ಯೋಜನೆಯ ಹಣ ಪಡೆಯಲು ಬಿಪಿಎಲ್ ಕಾರ್ಡ್, ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡು ಮೂರು ಮಕ್ಕಳು ಮೀರಿರದಂತಿರಬೇಕು(ಬಹುಪತಿ-ಪತ್ನಿಯರನ್ನು ಹೊಂದಿದ್ದರೂ ಎರಡು ಹೆಣ್ಣು ಮಕ್ಕಳು ಯೋಜನೆಯಡಿ ಅರ್ಹರು). ಫಲಾನುಭವಿ ಮಗು ಕಡ್ಡಾಯವಾಗಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿದ ದೃಢೀಕರಣ, ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗಿರಬಾರದು ಎನ್ನುವ ನಿಯಮಕ್ಕೆ ಬದ್ಧರಾಗಿರುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಹಣ ದೊರೆಯಲಿದೆ.
ಫಲಾನುಭವಿಗಳು ಚಾಲ್ತಿಯಲ್ಲಿನ ಬ್ಯಾಂಕ್ ಖಾತೆ ಸಂಖ್ಯೆ, ಐಎಸ್ಎಫ್ಸಿ ಕೋಡ್, ಆಧಾರ್ ಕಾರ್ಡ್ ಸಂಖ್ಯೆ, ಯೋಜನೆಯ ಒರಿಜಿನಲ್ ಬಾಂಡ್, ಮಗುವಿನ ಜನನ ಪ್ರಮಾಣ ಪತ್ರ, ತಂದೆ, ತಾಯಿ, ಮಗುವಿನ ಹೆಸರು ಬದಲಾವಣೆಯಾಗಿದ್ದರೆ ಸಂಬಂಧಿಸಿದ ಸಿಡಿಪಿಒ ಅವರಿಂದ ದೃಢೀಕರಣ ಪತ್ರ, ಬಾಂಡ್ ಕಳೆದಿದ್ದರೆ ಬಾಂಡ್ ನಕಲು ಪ್ರತಿ ಜತೆ ಎಫ್ಐಆರ್ ಪ್ರತಿ, ದತ್ತು ಮಕ್ಕಳಾಗಿದ್ದಲ್ಲಿಕಾನೂನಾತ್ಮಕವಾಗಿ ದತ್ತು ಪಡೆದ ಪೋಷಕರ ಹೆಸರನ್ನು ಸಿಡಿಪಿಒ ದೃಢೀಕರಿಸಬೇಕು. ತಾಲೂಕು ಕೋಡ್ ಬದಲಾವಣೆ ಇದ್ದಲ್ಲಿ ಸಿಡಿಪಿಒ ದೃಢೀಕರಿಸಿದ ನಂತರವೇ ಪರಿಪಕ್ವ ಹಣ ನೀಡಲಾಗುವುದು.

ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಂದ ಈಗಾಗಲೇ ಅರ್ಜಿ ಪಡೆದು ಅಗತ್ಯ ದಾಖಲೆಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಅರ್ಜಿದಾರ ಮಗುವಿನ ಜನ್ಮ ದಿನಾಂಕದಿಂದ ಹದಿನೆಂಟು ವರ್ಷ ಮೀರಿದ ಹೆಣ್ಣು ಮಕ್ಕಳಿಗೆ ಈ ಪರಿಪಕ್ವ ಹಣ ನೀಡಲಾಗುತ್ತದೆ. ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುತ್ತದೆ ಎಂದು ಭಾರತಿ ಬಣಕಾರ್, ಡಿಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರು ಹೇಳಿದ್ದಾರೆ.

Share this post

Post Comment