ಲೋಕಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಯಾರ ಆಯ್ಕೆ?

ಲೋಕಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ಯಾರ ಆಯ್ಕೆ?

ಹದಿನೆಂಟನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ನಡೆದ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಹಿನ್ನಡೆಯನ್ನು ಅನುಭವಿಸಿತ್ತು. ಸಂಪ್ರದಾಯದ ಪ್ರಕಾರ, ಡೆಪ್ಯೂಟಿ ಸ್ಪೀಕರ್ ಹುದ್ದೆ ವಿಪಕ್ಷಗಳಿಗೆ ನೀಡಬೇಕೆನ್ನುವ ಒತ್ತಡಕ್ಕೆ ಬಿಜೆಪಿ ಮಣಿದಿಲ್ಲ.

ಹಾಗಾಗಿ, ಈಗ ಡೆಪ್ಯೂಟಿ ಸ್ಪೀಕರ್ ಹುದ್ದೆಗೂ ಚುನಾವಣೆ ನಡೆಯಲಿದೆ. ಮೋದಿಯವರ ಎರಡನೇ ಅವಧಿಯಲ್ಲಿ ಈ ಹುದ್ದೆ ಖಾಲಿಯಾಗಿತ್ತು, ಹದಿನಾರನೇ ಲೋಕಸಭೆಯಲ್ಲಿ ಎಐಎಡಿಎಂಕೆಯ ತಂಬಿದೊರೈ ಈ ಹುದ್ದೆಯಲ್ಲಿದ್ದರು. ಈ ಬಾರಿ, ತೆಲುಗುದೇಶಂ ಪಕ್ಷಕ್ಕೆ ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ಬಿಜೆಪಿ ಬಿಟ್ಟುಕೊಟ್ಟಿದೆ.

NDA ಮೈತ್ರಿಕೂಟದ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಇನ್ನೊಂದು ಕಡೆ, ಇಂಡಿಯಾ ಮೈತ್ರಿಕೂಟವು, ಲೋಕಸಭೆ ಡೆಪ್ಯೂಟಿ ಸ್ಪೀಕರ್ ಚುನಾವಣೆಗೆ ಉತ್ತರ ಪ್ರದೇಶದ ಫೈಜಾಬಾದ್ (ಅಯೋಧ್ಯೆ) ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಈ ಬಾರಿ ಡೆಪ್ಯೂಟಿ ಸ್ಪೀಕರ್ ಹುದ್ದೆಯನ್ನು ಸಂಪ್ರದಾಯದಂತೆ ತನಗೆ ಬಿಟ್ಟುಕೊಡಬೇಕೆಂಬ ಪ್ರತಿಪಕ್ಷಗಳ ಬೇಡಿಕೆಗೆ ಬಿಜೆಪಿ ನೇತೃತ್ವದ NDA ಮೈತ್ರಿಕೂಟ ಒಲ್ಲೆ ಎಂದಿತ್ತು. ಮೈತ್ರಿಕೂಟದ ಭಾಗವಾದ ತೆಲುಗು ದೇಶಂ ಪಾರ್ಟಿಗೆ ಡೆಪ್ಯೂಟಿ ಸ್ಪೀಕರ್ ಹುದ್ದೆ ಬಿಟ್ಟುಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮೋದಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪ್ರತಿಪಕ್ಷಗಳು ಮುಂದಿನ ಕಾರ್ಯತಂತ್ರ ರೂಪಿಸಲಿವೆ. ಒಂದು ವೇಳೆ, ಟಿಡಿಪಿ ಅಭ್ಯರ್ಥಿಯೇ ಫೈನಲ್ ಆದರೆ, ಇಂಡಿಯಾ ಮೈತ್ರಿಕೂಟವು ಚುನಾವಣೆಯಿಂದ ಹಿಂದಕ್ಕೆ ಸರಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ. ಇಂಡಿಯಾ ಮೈತ್ರಿಕೂಟವು ಮುಂದಾಲೋಚನೆಯಿಂದ ನಿರ್ಧಾರಕ್ಕೆ ಬರಬಹುದು.

ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕರಾದ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಅವರು ಈ ನಿಟ್ಟಿನಲ್ಲಿಔಪಚಾರಿಕ ಸಭೆ ನಡೆಸಿದ್ದು, ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ಸಂದೇಶ ರವಾನಿಸಲು ನಿರ್ಧರಿಸಿದ್ದಾರೆ.

ದಲಿತ ಸಮುದಾಯದ ನಾಯಕರಾಗಿರುವ ಅವಧೇಶ್ ಪ್ರಸಾದ್ ಅವರು ಫೈಜಾಬಾದ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರೂ ಅಯೋಧ್ಯೆಯ ಸಂಸದರೆಂದೇ ಚಿರಪರಿಚಿತ. ಇವರ ಹೆಸರನ್ನು ಸೂಚಿಸಿದ್ದು, ಪಶ್ಚಿಮ ಬಂಗಾಳ ಸಿಎಂ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಎಂದು ಮೂಲಗಳು ಹೇಳಿವೆ. ರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಆದಿಯಾಗಿ, ವಿಪಕ್ಷಗಳು ಚುನಾವಣೆಯ ವೇಳೆ, ಬಿಜೆಪಿಯನ್ನು ಟೀಕಿಸಿದ್ದವು.

Share this post

Post Comment