ಪೆಟ್ರೋಲ್, ಡೀಸೆಲ್ ಮತ್ತು ಮದ್ಯದ ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೊಮ್ಮೆ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಚರ್ಚೆ ನಡೆಸುತ್ತಿದೆ.
ಬೆಂಗಳೂರು ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ವ್ಯಾಪ್ತಿಯಲ್ಲಿ ಸುಮಾರು 18 ಲಕ್ಷ ಆಸ್ತಿಗಳಿವೆ. ಬಿಬಿಎಂಪಿ ದಾಖಲೆಗಳ ಪ್ರಕಾರ ಜುಲೈ 1ರವರೆಗೆ ಪಾಲಿಕೆ ಈ ಹಣಕಾಸು ವರ್ಷದಲ್ಲಿ 1654.47 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದೆ.
2023-24ರ ಹಣಕಾಸು ವರ್ಷದಲ್ಲಿ ಬಿಬಿಎಂಪಿ 2293.81 ಕೋಟಿ ರೂ. ತೆರಿಗೆ ಸಂಗ್ರಹಿಸಿತ್ತು. ಏಪ್ರಿಲ್ ನಿಂದ ಜೂನ್ ವರೆಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತೆರಿಗೆ ಪಾವತಿಯಲ್ಲಿ ಶೇ. 5ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿತ್ತು ಮತ್ತು ಅದನ್ನು ಜುಲೈವರೆಗೆ ಸರ್ಕಾರ ವಿಸ್ತರಿಸಿದೆ ಎಂದು ಬಿಬಿಎಂಪಿ ಕಂದಾಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಶೇ. 5ರಷ್ಟು ರಿಯಾಯಿತಿ ಕಾರಣದಿಂದ ಇಲ್ಲಿಯವರೆಗೆ ಸಂಗ್ರಹವಾದ ಮೊತ್ತವು ಕಡಿಮೆಯಾಗಿದ್ದರೂ, ಆರ್ಥಿಕ ವರ್ಷವು ಇದೀಗ ಪ್ರಾರಂಭವಾಗಿದೆ ಮತ್ತು ಶೀಘ್ರದಲ್ಲೇ ತೆರಿಗೆ ಪಾವತಿಸದವರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಅದನ್ನು ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಯಿತು.
ಆಸ್ತಿ ತೆರಿಗೆ ಹೆಚ್ಚಳದ ಕುರಿತು ಚರ್ಚೆಗಳು ಪುನರಾರಂಭಗೊಂಡಿವೆ. ಆದರೆ ಎಷ್ಟು ಪ್ರಮಾಣ ಹೆಚ್ಚಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಆರಂಭದಲ್ಲಿ ವಾರ್ಷಿಕವಾಗಿ ಶೇ. 5ರಷ್ಟು ತೆರಿಗೆ ಹೆಚ್ಚಿಸುವ ಪ್ರಸ್ತಾವನೆ ಬಂದಿತ್ತು. ಆದರೆ ಅದನ್ನು ತಡೆಹಿಡಿಯಲಾಗಿತ್ತು. ಈಗ ಚರ್ಚೆಗಳು ಶುರುವಾಗಿವೆ. ವಲಯಗಳ (A-E) ಆಧಾರದ ಮೇಲೆ ತೆರಿಗೆ ಸಂಗ್ರಹಣೆಯ ಅಸ್ತಿತ್ವದಲ್ಲಿರುವ ಸ್ವರೂಪವು ಮುಂದುವರಿಯುತ್ತದೆ. ಉತ್ತಮ ಆಡಳಿತ ಮತ್ತು ತೆರಿಗೆ ಸಂಗ್ರಹಕ್ಕಾಗಿ ಬಿಬಿಎಂಪಿಯನ್ನು ವಿಭಜಿಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ಗಳು ತಿಳಿಸಿದ್ದಾರೆ. ಸರ್ಕಾರ ತನ್ನ ವ್ಯಾಪ್ತಿಯಲ್ಲಿರುವ ಆಸ್ತಿಗಳ ಸಂಖ್ಯೆಯನ್ನು 20 ಲಕ್ಷಕ್ಕೆ ಹೆಚ್ಚಿಸುವ ಬಗ್ಗೆಯೂ ಚರ್ಚಿಸುತ್ತಿದೆ. ಇದಕ್ಕಾಗಿ ಸಮೀಕ್ಷೆಗಳು ನಡೆಯುತ್ತಿವೆ. “ಇನ್ನೂ ಲೆಕ್ಕಾಚಾರಗಳು ನಡೆಯುತ್ತಿವೆ. ಅವುಗಳ ಪರಿಗಣನೆಗೆ ಮತ್ತು ಅಂತಿಮ ನಿರ್ಧಾರಕ್ಕಾಗಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.