ಔರಾದ(ಬಿ) ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸರುಬಾಯಿ ವೈಜಿನಾಥ ಘೂಳೆ ಮತ್ತು ಉಪಾಧ್ಯಕ್ಷರಾಗಿ ರಾಧಾಬಾಯಿ ಕೃಷ್ಣ ನರೋಟೆ ಅವರು ಅವಿರೋಧವಾಗಿ ಆಯ್ಕೆಯಾದರು.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ವಾರ್ಡ್-19ರ ಸದಸ್ಯೆ ಸರುಬಾಯಿ ವೈಜಿನಾಥ ಘೂಳೆ ಅವರು ಅಧ್ಯಕ್ಷ ಸ್ಥಾನಕ್ಕೆ ಮತ್ತು ವಾರ್ಡ್ 1ರ ಸದಸ್ಯೆ ರಾಧಾಬಾಯಿ ಕೃಷ್ಣ ನರೋಟೆ ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ನಾಮಪತ್ರಗಳು ಬಾರದ ಕಾರಣ ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿಗಳಾದ ಮಲಶೆಟ್ಟಿ ಚಿದ್ರೆ ಘೋಷಿಸಿದರು. ಈ ಮೂಲಕ ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಿದೆ.
ಬಳಿಕ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನಿಸಿದರು. ಈ ವೇಳೆ ಮಾತನಾಡಿ, ಔರಾದ(ಬಿ) ಪಟ್ಟಣವನ್ನು ಸರ್ವಾಂಗೀಣ ಅಭಿವೃದ್ಧಿಪಡಿಸಲು ನಿರಂತರ ಶ್ರಮ ವಹಿಸುತ್ತಿದ್ದೇನೆ. ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಎಲ್ಲ ಸದಸ್ಯರ ಸಹಯೋಗದೊಂದಿಗೆ ಔರಾದ(ಬಿ) ಪಟ್ಟಣದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು.
ಕುಡಿಯುವ ನೀರು, ರಸ್ತೆ, ವಿದ್ಯುತ್, ಸ್ವಚ್ಛತೆ, ಬೀದಿ ದೀಪಗಳನ್ನು ಅಳವಡಿಸುವುದು ಒಳಗೊಂಡು ಪಟ್ಟಣಕ್ಕೆ ಬೇಕಿರುವ ಎಲ್ಲ ಸೌಕರ್ಯಗಳನ್ನು ಒದಗಿಸಬೇಕು. ನಿಮ್ಮ ಎಲ್ಲ ಅಭಿವೃದ್ಧಿಪರ ಕೆಲಸಗಳಿಗೆ ನನ್ನ ಸಹಕಾರ ಸದಾ ಇರುತ್ತದೆ. ಪಟ್ಟಣವನ್ನು ಮಾದರಿಯನ್ನಾಗಿಸಲು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಜಿಲ್ಲೆಯ ಸಂಘಟನಾತ್ಮಕ ಉಸ್ತುವಾರಿಯೂ ಆದ ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಕಿರಣ ಪಾಟೀಲ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮಂಡಲ ಉಸ್ತುವಾರಿ ಮಹೇಶ್ವರ ಸ್ವಾಮಿ, ಕಾರ್ಯದರ್ಶಿ ಖಂಡೋಬಾ ಕಂಗಟೆ, ಪಟ್ಟಣ ಪಂಚಾಯತ್ ಸದಸ್ಯರಾದ ಅಂಬಿಕಾ ಕೇರಬಾ ಪವಾರ್, ಸಂತೋಷ ಪೋಕಲವಾರ, ಧೊಂಡಿಬಾ ನರೋಟೆ, ಶಿವಾಜಿ ಲಕ್ಷ್ಮಣ ವಡೆಯಾರ್, ಅಬ್ಜಲ್ ಪಠಾಣ್, ಶೀಲಾಬಾಯಿ ರಾಮಚಂದ್ರ, ಸಂಗೀತಾ ಯಾದವರಾವ, ಪ್ರೇರಣಾ ಬಾಬು, ಬನಸಿಲಾಲ ಖಿರಾನಾಯ್ಕ, ದಯಾನಂದ ಘೂಳೆ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.