ಬೀದರ್ : ಜಿಲ್ಲೆಯ ಗಡಿ ಭಾಗದಲ್ಲಿ ಔರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಸೆಪ್ಟೆಂಬರ್ 6 ರಂದು ನಡೆಯಲಿದ್ದು, ಈ ಬಾರಿಯ ಎರಡೂ ಸ್ಥಾನಗಳು ಸಾಮಾನ್ಯ ಮಹಿಳಾ ಮೀಸಲಾತಿಗೆ ಒಳಪಟ್ಟಿವೆ.
ಸದಸ್ಯ ಬಲಾಬಲ
ಪಟ್ಟಣ ಪಂಚಾಯಿತಿಯಲ್ಲಿ 12 ಮಂದಿ ಬಿಜೆಪಿ, 6 ಮಂದಿ ಕಾಂಗ್ರೆಸ್, ಮತ್ತು 2 ಮಂದಿ ಪಕ್ಷೇತರ ಸದಸ್ಯರು ಸೇರಿ ಒಟ್ಟು 20 ಮಂದಿ ಸದಸ್ಯರಿದ್ದಾರೆ
ಕಳೆದ ಅವಧಿಯಲ್ಲಿ ಅಂಬಿಕಾ ಕೇರಬಾ ಪವಾರ್ (ಬಿಜೆಪಿ) ಅಧ್ಯಕ್ಷೆಯಾಗಿದ್ದು, ಸಂತೋಷ ಪೋಕಲವಾರ ಉಪಾಧ್ಯಕ್ಷರಾಗಿದ್ದರು. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸರಸ್ವತಿ ಘುಳೆ ಮತ್ತು ರಾಧಾಬಾಯಿ ನರೋಟೆ ನಡುವೆ ಪೈಪೋಟಿ ನಡೆಯಲಿದ್ದು, ಕೊನೆಯ ಕ್ಷಣದಲ್ಲಿ ಇತರ ಹೆಸರುಗಳು ಸಹ ಪೈಪೋಟಿಗೆ ಬರಬಹುದೆಂಬ ನಿರೀಕ್ಷೆಯಿದೆ.
ಕಳೆದ ಹಲವು ಬಾರಿ ಬಿಜೆಪಿ ಶಾಸಕ ಪ್ರಭು ಚವಾಣ್ ಅವರ ತೀರ್ಮಾನವೇ ಅಂತಿಮವಾಗಿದ್ದು,ಈ ಬಾರಿಯೂ ಕೂಡ ಅವರ ಸೂಚನೆ ಮೇರೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಆಕ್ಷೇಪ: ಕೆಲವು ಪಟ್ಟಣ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಚಿಹ್ನೆ ಮೇಲೆ ಗೆದ್ದು ನಂತರ ಬಿಜೆಪಿಗೆ ಸೇರಿದ್ದಾರೆ ಎಂಬ ಆರೋಪವಿದ್ದು, ಇಂತಹ ಸದಸ್ಯರ ವಿರುದ್ಧ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಸಂಚಾಲಕ ಸುಧಾಕರ ಕೊಳ್ಳೂರ್ ತಿಳಿಸಿದ್ದಾರೆ.
ವರದಿ : ಅಂಬಾದಾಸ ಉಪ್ಪಾರ ,ಔರಾದ