- ಸಂಪೂರ್ಣ ಹದಗೆಟ್ಟ ರಸ್ತೆ ವಾಹನ ಸವಾರರು ಪರದಾಟ
- ಚಿಂತಾಕಿ ಗ್ರಾಮದಿಂದ ಬೆಲ್ದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ
- ಮುಂಗಾರು ಮಳೆಗೆ ರಸ್ತೆಗಳು ಸಂಪೂರ್ಣ ಹಾಳು
ಔರಾದ: ತಾಲೂಕಿನ ಚಿಂತಾಕಿ ಗ್ರಾಮದಿಂದ ಬೆಲ್ದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿ ಜಲ್ಲಿ ಕಲ್ಲುಗಳು ತೇಲಿವೆ.ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯಲ್ಲಿನ ಸತತವಾಗಿ ಸುರಿಯುತ್ತಿರುವ ಧಾರಕಾರ ಮಳೆಯ ಪ್ರಯುಕ್ತ ರಸ್ತೆಗಳು ಕೆರೆ,ಗುಂಟೆಗಳಾಗಿ ಮಾರ್ಪಟ್ಟು ರಾತ್ರಿ ವೇಳೆ ಪ್ರಯಾಣಿಕರಿಗೆ ರಸ್ತೆ ಕಾಣಿಸದೆ ವಾಹನ ಸವಾರರು ಪರದಾಡುವ ಜೊತೆಗೆ ಅಪಘಾತಗಳಾಗಿ ಕೈ ಕಾಲುಗಳನ್ನು ಕಳೆದುಕೊಳ್ಳುವ ಅತಂಕ ಎದುರಾಗಿದೆ.
ಈ ಭಾಗದ ಗ್ರಾಮಗಳು ತೀರ ಹಿಂದುಳಿದ ಗ್ರಾಮಗಳಾಗಿವೆ.ವ್ಯಾಪರ,ವಹಿವಾಟು ಸೇರಿದಂತೆ ಇನ್ನಿತರೆ ವ್ಯವಹಾರಗಳನ್ನು ಮಾಡಲು ಈ ರಸ್ತೆಯ ಮಾರ್ಗವಾಗಿಯೇ ತಾಲೂಕು ಕೇಂದ್ರಕ್ಕೆ ಹೋಗಬೇಕಿದೆ.
ಈ ರಸ್ತೆ ಕಳೆದ ಡಾಂಬರೀಕರಣ ಕಂಡು 25 ರಿಂದ 30 ವರ್ಷಗಳೇ ಕಳೆದಿದ್ದು,ಇದುವರೆಗೂ ಅಭಿವೃದ್ಧಿ ಭಾಗ್ಯ ಕಂಡಿಲ್ಲ. ಮಳೆ ಬಂದರೆ ಕೆಸರಿನ ಅಭಿಷೇಕ,ನಂತರ ದಿನಗಳಲ್ಲಿ ಧೂಳಿನ ಅಭಿಷೇಕವಾಗುವ ರಸ್ತೆಯ ಅಭಿವೃದ್ಧಿ ಬಗ್ಗೆ ಕೇಳುವವರಿಲ್ಲದಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಶಾಸಕರದ್ದು ಬರಿ ಭರವಸೆಯಾಗಿದೆ: ರಸ್ತೆ ಹದಿಗೆಟ್ಟಿರುವ ಕಾರಣ ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಹಾಗೂ ವಾಹನ ಸವಾರರು ಬರಿ ತೊಂದರೆ ಅನುಭವಿಸುತ್ತಿದ್ದಾರೆ.ಅಲ್ಲದೆ ಎಷ್ಟು ಬಾರಿ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಗಳು ಸಹ ನಡೆದಿದೆ.ರಸ್ತೆಯನ್ನು ಅಭಿವೃದ್ಧಿ ಮಾಡಿಸುವೆ ಎಂದು ಸ್ಥಳೀಯ ಶಾಸಕ ಪ್ರಭು.ಬಿ ಚವ್ಹಾಣ ಸುಮಾರು ಸರಿ ಭರವಸೆ ನೀಡಿದ್ದಾರೆ ಆದರೆ ಅಭಿವೃದ್ಧಿ ಕೆಲಸ ಮಾತ್ರ ಮಾಡಿಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ.
ಚಿಂತಾಕಿ ಬೆಲ್ದಾಳ ಮಾರ್ಗದಲ್ಲಿನ ಸಂಚಾರಬೇಡ ಎನ್ನುವಂತಾಗಿದೆ.ನಿತ್ಯ ತಾಲೂಕು ಕೇಂದ್ರಕ್ಕೆ ತೆರಳುವ ಸಾವಿರಾರು ಜನರಿಗೆ,ವಾಹನಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಕೂಡಲೇ ಹಾಳಾಗಿರುವ ರಸ್ತೆಯ ದುರಸ್ತಿಗೆ,ಲೋಕಾಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಸ್ತೆ ತಡೆದು ಹೋರಾಟ ಮಾಡಲಾಗುವುದು.
-ಸತೀಶ್ ವಗ್ಗೆ ,ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರು ಬೀದರ
ಕ್ರಿಯಾಯೋಜನೆ ರೂಪಿಸಿದ ನಂತರ ಟೆಂಡರ್ ಕರೆದು ಅನುಮೋದನೆಯಾದ ಮೇಲೆ ಕಾಮಗಾರಿ ಆರಂಭಿಸಲಾಗುವುದು.
-ಸುನಿಲ್ ಚೀರ್ಲ್ಲಗೆ,ಲೋಕೋಪಯೋಗಿ ಇಲಾಖೆ ಅಧಿಕಾರಿ ಔರಾದ
ವರದಿ:ಅಂಬಾದಾಸ ಉಪ್ಪಾರ ಔರಾದ