ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.
ಈ ಹಿಂದೆ ಸಾಗರ್ ಪುರಾಣಿಕ್ ಅವರ ಡೊಳ್ಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕಾರ್ತಿಕ್ ಮಹೇಶ್ ಇದೀಗ ‘ರಾಮರಸ’ ಚಿತ್ರದ ಮೂಲಕ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾರ್ತಿಕ್ ರ ಮೊದಲ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೇ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದೀಗ ರಾಮರಸ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.
ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಸಿನಿಮಾದ ಸುದ್ದಿಗೋಷ್ಠಿಗೆ ನಟ ಕಿಚ್ಚ ಸುದೀಪ್ ಅವರು ಅತಿಥಿಯಾಗಿ ಬಂದಿದ್ದರು. ನೂತನ ‘ರಾಮರಸ’ ಸಿನಿಮಾದ ಹೀರೋ ಆಗಿ ಕಾರ್ತಿಕ್ ಮಹೇಶ್ ಅವರನ್ನು ಕಿಚ್ಚ ಸುದೀಪ್ ಲಾಂಚ್ ಮಾಡಿದ್ದು, ಕಿಚ್ಚ ಸುದೀಪ್ ಅವರಿಂದ ಹೀರೋ ಆಗಿ ಲಾಂಚ್ ಆದ ಕಾರ್ತಿಕ್ ಮಹೇಶ್ ಅವರು ಫುಲ್ ಖುಷ್ ಆಗಿದ್ದಾರೆ. ಈ ರಾಮರಸ ಚಿತ್ರವನ್ನು ಜಿ-ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗುರು ದೇಶಪಾಂಡೆ ನಿರ್ಮಿಸಿದ್ದಾರೆ. ಚಿತ್ರವನ್ನು ಗಿರಿರಾಜ್ ಬಿಎಂ ನಿರ್ದೇಶಿಸಿದ್ದು, ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ತಿಕ್, “ಬಿಗ್ ಬಾಸ್ನಲ್ಲಿ ಗೆಲ್ಲುವ ಕ್ಷಣದಲ್ಲಿ ಸುದೀಪ್ ಸರ್ ನನ್ನ ಕೈ ಹಿಡಿದಿದ್ದರು.. ಅಂದಿನಿಂದ ನಿಸ್ಸಂದೇಹವಾಗಿ ಅವರ ಬೆಂಬಲ ಮುಂದುವರಿಯುತ್ತಿದೆ ಎಂದರು. ಅಂತೆಯೇ ಡೊಳ್ಳು ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರೂ, ರಾಮರಸ ನನ್ನ ಮೊದಲ ಕಮರ್ಷಿಯಲ್ ಚಿತ್ರವಾಗಿದೆ ಎಂದರು. ಬಿಗ್ ಬಾಸ್ ಮೂಲಕ ಚಿತ್ರೋದ್ಯಮದ ಬಗ್ಗೆ ಸಾಕಷ್ಚು ಕಲಿತಿದ್ದೇನೆ. ನಾನು ಹೆಚ್ಚು ಜನರನ್ನು ಮತ್ತು ಚಲನಚಿತ್ರ ಬಂಧುಬಳಗವನ್ನು ತಲುಪಿದ್ದೇನೆ, ಹಾಗಾಗಿ ಸಾಕಷ್ಟು ಅವಕಾಶಗಳು ನನ್ನನ್ನು ಸಂಪರ್ಕಿಸುತ್ತಿವೆ ಎಂದರು.
ರಾಮರಸ ಚಿತ್ರಕ್ಕೆ ಸಹಿ ಹಾಕುವ ಮುನ್ನ ನಾನು ಸುಮಾರು 20ಕ್ಕೂ ಹೆಚ್ಚು ಸ್ಕ್ರಿಪ್ಟ್ಗಳನ್ನು ಕೇಳಿದ್ದೆ. ನನ್ನ ಮೊದಲ ಚಿತ್ರ ಡೊಳ್ಳುನಲ್ಲಿ ಹಳ್ಳಿಯ ಯುವಕನಾಗಿ ಕಾಣಿಸಿಕೊಂಡಿದ್ದೆ. ಇದೀಗ ರಾಮರಸ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ಪರಿಕಲ್ಪನೆ ಆಧಾರಿತ ವಾಣಿಜ್ಯ ಮನರಂಜನೆಯಾಗಿದೆ ಎಂದು ಕಾರ್ತಿಕ್ ಹೇಳಿದರು.