ಹತ್ತು ವರ್ಷಗಳ ನಂತರ ಬಿಸಿಲನಾಡು ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೆ ಸೆಪ್ಟೆಂಬರ್ 17ರ ಸಂಜೆ 4 ಗಂಟೆಗೆ ಕಲಬುರಗಿ ನಗರದ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಂಪುಟ ಸಭೆ ನಿಗದಿಗೊಳಿಸಲಾಗಿದೆ.
ಕಲಬುರಗಿಯಲ್ಲಿ ಪ್ರಸಕ್ತ ಸಾಲಿನ 19ನೇ ಸಚಿವ ಸಂಪುಟ ಸಭೆ ಎಂಬುದಾಗಿ ಸಚಿವ ಸಂಪುಟದ ಜಂಟಿ ಕಾರ್ಯದರ್ಶಿ ಆರ್.ಚಂದ್ರಶೇಖರ್ ಅವರು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಸೆಪ್ಟೆಂಬರ್ 17ರ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವರು. ಈ ನಿಟ್ಟಿನಲ್ಲಿ ಮುಂದಿನ ಐದು ದಿನದೊಳಗೆ ಆಯಾ ಇಲಾಖೆಗಳು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಈ ಹಿಂದೆ 2014 ರ ನವೆಂಬರ್ 28 ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು. ಈಗ ಹತ್ತು ವರ್ಷಗಳ ನಂತರ ಅವರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆಗೆ ದಿನಾಂಕ ಪ್ರಕಟವಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೇ ಸಂಪುಟ ಸಭೆ ಆಗಿರುತ್ತದೆ ಎಂದು ಹೇಳಿದರು.