ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾಗಿರುವ ಬಿಜೆಪಿ–ಜೆಡಿಎಸ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿರುವ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಬುಧವಾರ ಆರಂಭವಾಗಿದ್ದು, 45 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.
ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಶಾಂತಿಯುತ ಮತದಾನಕ್ಕೆ 3 ಕ್ಷೇತ್ರಗಳಲ್ಲಿ ಜಿಲ್ಲಾಡಳಿತಗಳು ಸಕಲ ಸಿದ್ಧತೆಯ ಜೊತೆಗೆ ಸೂಕ್ತ ಬಂದೋಬಸ್ತ್ ಕೈಗೊಂಡಿವೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಂಗ್ರೆಸ್ನಿಂದ ಸಿ.ಪಿ.ಯೋಗೇಶ್ವರ ಮತ್ತು ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ 276 ಮತಗಟ್ಟೆಗಳಿದ್ದು, 62 ನಗರ ವ್ಯಾಪ್ತಿ ಹಾಗೂ 214 ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಒಟ್ಟು 2,32,949 ಮತದಾರರಿದ್ದು, 1,12,324 ಪುರುಷ ಹಾಗೂ 1,20,617 ಮಹಿಳಾ ಮತದಾರರಿದ್ದಾರೆ. 8 ಜನ ತೃತೀಯ ಲಿಂಗಿಗಳಿದ್ದಾರೆ. 85 ವರ್ಷಕ್ಕೂ ಮೇಲ್ಪಟ್ಟ ಒಟ್ಟು 1,613 ಮತದಾರರಲ್ಲಿ 612 ಪುರುಷರು ಹಾಗೂ 1,001 ಮಹಿಳೆಯರಿದ್ದಾರೆ. 3,011 ಜನ ದಿವ್ಯಾಂಗರಲ್ಲಿ 1,669 ಪುರುಷ ಹಾಗೂ 1,342 ಮಹಿಳಾ ಮತದಾರರಿದ್ದಾರೆ. ಇನ್ನು 8,338 ಯುವ ಮತದಾರರಿದ್ದಾರೆ. ಜೊತೆಗೆ 47 ಸೇವಾ ಮತದಾರರು ಮತಹಕ್ಕು ಹೊಂದಿದ್ದಾರೆ.