ತಮಿಳಿನ ಖ್ಯಾತ ನಟ…. ದಳಪತಿ ವಿಜಯ್ ರಾಜಕೀಯ ಪಯಣ ಶುರು ಮಾಡಿದ್ದಾರೆ ಇದೇ ಮೊದಲ ಬಾರಿಗೆ ಬೃಹತ್ ರಾಜಕೀಯ ಸಮಾವೇಶ ನಡೆಸಿದ್ದಾರೆ. ತಮಿಳಿಗ ವೆಟ್ರಿ ಕಳಗಂ ಪಕ್ಷದ ತತ್ವ-ಸಿದ್ಧಾಂತ, ಗುರಿಗಳನ್ನು ಸಾರ್ವಜನಿಕಗೊಳಿಸಿದ್ದಾರೆ. ಸಮಾವೇಶದಲ್ಲಿ ಲಕ್ಷಾಂತರ ಅಭಿಮಾನಿಗಳು ಭಾಗಿಯಾಗುವ ಮೂಲಕ ದಳಪತಿ ವಿಜಯ್ಗೆ ಶಕ್ತಿ ತುಂಬಿದ್ದಾರೆ…
ಬೃಹತ್ ವೇದಿಕೆಯಲ್ಲಿ ರಾಜಕೀಯ ಶಕ್ತಿ ಪ್ರದರ್ಶಿಸಿದ ವಿಜಯ್
ತಮಿಳು ಸಿನಿಮಾರಂಗದಲ್ಲಿ ಮಿಂಚು ಹರಿಸುತ್ತಿರುವ ದಳಪತಿ ವಿಜಯ್ ರಾಜಕೀಯ ಪಯಣ ಆರಂಭಿಸಿದ್ದಾರೆ. ಈ ಮೂಲಕ ತಮಿಳು ಚಿತ್ರರಂಗದ ಮತ್ತೋರ್ವ ನಟ ರಾಜಕೀಯ ರಂಗ ಪ್ರವೇಶಿಸಿದಂತಾಗಿದೆ.
ಕಳೆದ ಫೆಬ್ರವರಿಯಲ್ಲಿ ತಮಿಳಿಗ ವೆಟ್ರಿ ಕಳಗಂ ಎಂಬ ಹೊಸ ರಾಜಕೀಯ ಪಕ್ಷ ಘೋಷಿಸಿದ್ದ ವಿಜಯ್ ಇಂದು ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾವೇಶ ನಡೆಸಿದ್ದಾರೆ. ಈ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಚೆನ್ನೈನಿಂದ 154 ಕಿ.ಮೀ ದೂರದಲ್ಲಿರುವ ವಿಲ್ಲುಪುರಂ ಬಳಿಯ ವಿಕ್ರವಂಡಿಯಲ್ಲಿ ಮೊದಲ ರಾಜಕೀಯ ಸಮಾವೇಶ ನಡೆಸಿದ ದಳಪತಿ ರಣಕಹಳೆ ಮೊಳಗಿಸಿದ್ರು…
ಇನ್ನು ಸಮಾವೇಶದ ಸುತ್ತ ವಿಚಾರವಾದಿ ದ್ರಾವಿಡ ಧೀಮಂತ ‘ಪೆರಿಯಾರ್’ ಇವಿ ರಾಮಸಾಮಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ ಕಾಮರಾಜ್, ಹಿಂದಿನ ತಮಿಳುನಾಡು ಆಳಿದ್ದ ರಾಜ-ಮಹಾರಾಜರು, ಹಾಗೂ ರಾಜಕೀಯ ದಿಗ್ಗಜರ ಬೃಹತ್ ಕಟೌಟ್ಗಳು ರಾರಾಜಿಸಿದ್ವು.
ದಳಪತಿ ವಿಜಯ್ ವೇದಿಕೆ ಮೇಲೆ ಬರ್ತಿದ್ದಂತೆ ಅಭಿಮಾನಿಗಳ ಜೈಕಾರ, ಹರ್ಷೋದ್ಘಾರ ಮೊಳಗಿತ್ತು. ಎಲ್ಲರಿಗೂ ಕೈ ಮುಗಿದ ವಿಜಯ್ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳತ್ತ ಕೈ ಬೀಸುತ್ತಾ ವೇದಿಕೆಗೆ ಆಗಮಿಸಿದ್ರು. ತಮಿಳುನಾಡಿನ ವಿವಿಧೆಡೆಯಿಂದ ಬಂದಿದ್ದ ಅಭಿಮಾನಿಗಳು, ಸ್ವಯಂಸೇವಕರ ಜೈಕಾರ ಮುಗಿಲುಮುಟ್ಟಿತ್ತು.
ಬಳಿಕ ಬೃಹತ್ ಜನಸ್ತೋಮ ಉದ್ದೇಶಿಸಿ ಇದೇ ಮೊದಲ ಬಾರಿಗೆ ರಾಜಕೀಯ ಭಾಷಣ ಮಾಡಿದ ದಳಪತಿ ವಿಜಯ್ ತಮ್ಮ ಪಕ್ಷದ ತತ್ವಗಳು ಹಾಗೂ ಸೈದ್ಧಾಂತಿಕ ದೃಷ್ಟಿಕೋನವನ್ನು ಘೋಷಿಸಿದ್ರು. ಪಕ್ಷದ ನೀತಿಗಳು ಹಾಗೂ ಕಾರ್ಯಕ್ರಮಗಳನ್ನು ಸಾರ್ವಜನಿಕಗೊಳಿಸಿದ್ರು.
ವೇದಿಕೆ ಮೇಲೆ ಬಂದ ವಿಜಯ್ ಜನರನ್ನು ಉದ್ದೇಶಿಸಿ, ಇಲ್ಲಿ ಒಂದು ಗುಂಪು ಕೆಲ ಸಮಯಗಳಿಂದ ಒಂದೇ ಹಾಡನ್ನ ಹಾಡಿಕೊಂಡು ಹೊಸದಾಗಿ ರಾಜಕೀಯಕ್ಕೆ ಬಂದವರ ಮೇಲೆ ಒಂದು ಬಣ್ಣವನ್ನ ಹಚ್ಚಿ, ಗುಮ್ಮನನ್ನ ತೋರಿಸಿ ಜನರನ್ನ ಯಾಮಾರಿಸಿಕೊಂಡು ಬಂದಿದ್ದಾರೆ. ಆದರೆ ಇವರು ಒಳಗೆ ಒಪ್ಪಂದ ಮಾಡಿಕೊಂಡು, ಚುನಾವಣೆ ವೇಳೆ ಮಾತ್ರ ಪ್ರಣಾಳಿಕೆಗಳನ್ನ ಘೋಷಿಸುತ್ತಾರೆ ಎಂದು ಹೇಳಿದ್ದಾರೆ.
ಇನ್ನು ದಳಪತಿ ವಿಜಯ್ ಟಿವಿಕೆ ಪಕ್ಷ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಗುರಿ ಹೊಂದಿದೆ. ನಟ ದಳಪತಿ ವಿಜಯ್ ರಾಜಕೀಯ ಆಗಮನ ದೇಶಾದ್ಯಂ ಭಾರಿ ಗಮನ ಸೆಳೆದಿದೆ. 3 ದಶಕಗಳ ಕಾಲ ತಮಿಳು ಚಿತ್ರರಂಗ ಆಳುವ ಮೂಲಕ ಅಭಿಮಾನಿಗಳ ದೇವರು ಎನಿಸಿರುವ ವಿಜಯ್ 68 ಸಿನಿಮಾಗಳಲ್ಲಿ ನಟಿಸಿದ್ದಾರೆ. ದಳಪತಿಯ ರಾಜಕೀಯ ಹಾದಿ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.