ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕೋಮುಗಲಭೆ ಬಹಳ ಸಣ್ಣ ಘಟನೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ, ಇದು ಸಣ್ಣ ಗಲಾಟೆ ಅಂತೀರಲ್ಲಾ?
ದೊಡ್ಡ ಗಲಾಟೆ ಅಂದರೆ ಯಾವ ರೀತಿ ಆಗಬೇಕು ಎಂದು ಜಿ. ಪರಮೇಶ್ವರ್ ಅವರಿಗೆ ಪ್ರಶ್ನೆ ಮಾಡಿದರು.
ನಾಗಮಂಗಲ ಕೋಮುಗಲಭೆ ವಿಷಯ ಗಂಭೀರವಾಗಿದೆ. ಇಲ್ಲಿನ ಸ್ಥಿತಿ ನೋಡಿದರೆ ಮನಕಲಕುತ್ತದೆ. ಕೆಲವು ಸಮುದಾಯಗಳನ್ನು ಓಲೈಕೆ ಮಾಡುತ್ತಿರುವುದು ಎದ್ದು ಕಾಣಿತ್ತಿದೆ. ಹಿಂದೂಗಳು ಹಬ್ಬ ಆಚರಣೆ ಮಾಡುವುದು ಕಾನೂನು ಬಾಹಿರವಾ? ಹೀಗೆ ಮುಂದುವರೆದರೆ ದೇಶ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂದು ಹೇಳಿದರು.
ಈ ಗಲಭೆ ಪೂರ್ವ ನಿಯೋಜಿತ ಎನಿಸುತ್ತದೆ. ಟಾರ್ಗೆಟ್ ಮಾಡಿ ಕೆಲವರ ಅಂಗಡಿಗಳಿಗೆ ಬೆಂಕಿ ಹಾಕಲಾಗಿದೆ. ಇದರ ಹಿಂದಿನ ಉದ್ದೇಶ ಏನು? ಯಾರು ಮಾಡಿದ್ರು ಎಂದು ಗೊತ್ತಾಗಬೇಕು. ಕಳೆದ ವರ್ಷವೂ ಇಲ್ಲಿ ಗಲಾಟೆ ನಡೆದಿದೆ. ಸರ್ಕಾರ ಎಚ್ಚೆತ್ತು ಶ್ರದ್ಧೆ ವಹಿಸಬೇಕಿತ್ತು. ಗಣಪತಿ ಮೆರವಣಿಗೆ ವೇಳೆ ಭದ್ರತೆ ಒದಗಿಸಬೇಕಿತ್ತು ಎಂದು ಹೇಳಿದರು.
ಮುಂದೆ ಅವರ ಆಚರಣೆಗಳನ್ನು ವಿರೋಧಿಸಬೇಕಾಗುತ್ತದೆ: ಹಿಂದೂ ಆಚರಣೆ ವಿರೋಧಿಸಿದರೆ, ಮುಂದೆ ಅವರ ಆಚರಣೆಗಳನ್ನು ವಿರೋಧಿಸಬೇಕಾಗುತ್ತದೆ. ಗಣೇಶ ಕೂರಿಸಿದವರು A1, A2 ಆದರೆ ಬೆಂಕಿ ಇಟ್ಟು, ಗಲಭೆ ಮಾಡಿದವರು ಕಡೆಯಲ್ಲಿದ್ದಾರೆ. ಯಾರಿಗಾಗಿ ಸರ್ಕಾರ ನಡೆಸುತ್ತಿದ್ದೀರಿ? ಒಂದು ಕೋಮಿಗಾಗಿ ನಿಮ್ಮ ಸರ್ಕಾರವಾ? ಟಾರ್ಗೆಟ್ ಮಾಡಿದವರನ್ನ ನೀವು ಏನು ಮಾಡ್ತೀರಿ? ಗಣೇಶ ಕೂರಿಸಿ, ಮೆರವಣಿಗೆ ಮಾಡಿದ್ದೆ ತಪ್ಪಾ? ಗಲಭೆಯಿಂದ ಬಡ ಜನರು ಬೀದಿಗೆ ಬಂದಿದ್ದಾರೆ ಎಂದರು.
ಎಫ್ ಐ ಆರ್ ಮೊದಲು ಕ್ಯಾನ್ಸಲ್ ಮಾಡಬೇಕು: ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಎಂದವರನ್ನ ಲೆಕ್ಕಕ್ಕೆ ಇಡಲಿಲ್ಲ. ಮತೀಯ ಶಕ್ತಿ ನಡೆಸುತ್ತಿರುವ ಸರ್ಕಾರ ಇದು. ಕಾಂಗ್ರೆಸ್ ಮುಖವಾಡ ಧರಿಸಿ ಮತೀಯ ಶಕ್ತಿ ತಲೆ ಎತ್ತತ್ತಿದೆ. ಮತೀಯ ಶಕ್ತಿ ತಡೆಗಟ್ಟದಿದ್ರೆ ಬಿಜೆಪಿ ಕಾರ್ಯಕರ್ತ ಸುಮ್ಮನೆ ಕೂರುವುದಿಲ್ಲ. ಈ FIR ಮೊದಲು ಕ್ಯಾನ್ಸಲ್ ಮಾಡಬೇಕು. ಯಾರು ಬೆಂಕಿ ಇಟ್ಟರೋ ಅವರು A1 ಆಗಬೇಕು. ಹೊಡೆದವರು ಮೊದಲು ಆರೋಪಿ ಆಗಬೇಕು ಹೊಡೆಸಿಕೊಂಡವರಲ್ಲ ಎಂದು ಆಗ್ರಹಿಸಿದರು.