ಅಮಾನಿಕೆರೆ ಕೋಡಿ ಹರಿಯುವ ಸೇತುವೆ ಉದ್ಘಾಟನೆ

ಅಮಾನಿಕೆರೆ ಕೋಡಿ ಹರಿಯುವ ಸೇತುವೆ ಉದ್ಘಾಟನೆ

ನ್ಯೂಸ್‌ ಡೆಸ್ಕ್‌ ಉತ್ತರ ಕರ್ನಾಟಕ : ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಭಾಗವಾಗಿ, ಜಿಲ್ಲೆಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಕಾರ್ಡಿಯಾಲಜಿ ಕೇಂದ್ರವನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ನಗರದ ಅಮಾನಿಕೆರೆ ಕೋಡಿ ನೀರು ಹರಿಯುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲೋಕೋಪಯೋಗಿ ಇಲಾಖೆ, ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ರೂ. 6.60 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸೇತುವೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಗೃಹ ಸಚಿವರು,

ನಗರದ ಅಮಾನಿಕೆರೆ ಕೋಡಿ ನೀರು ಹರಿಯುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಿರಿದಾಗಿದ್ದ ಸೇತುವೆಯನ್ನು ಅಗಲೀಕರಣಗೊಳಿಸಿ, ಹೊಸ ಸೇತುವೆ ನಿರ್ಮಾಣಕ್ಕೆ ಬಹು ದಿನಗಳ ಬೇಡಿಕೆಯಾಗಿತ್ತು. ಅಪಘಾತಗಳಾಗಿ ಸಾವು ಸಂಭವಿಸಿವೆ. ಈ ಭಾಗದ ಜನರು, ಕೌನ್ಸಿಲರ್‌ಗಳು ಒತ್ತಾಯಿಸಿ‌ ಮನವಿ ಸಲ್ಲಿಸಿದ್ದರು. ರೂ. 6.60 ಕೋಟಿ  ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ಕೊರಟಗೆರೆ, ಶಿರಾ, ಮಧುಗಿರಿ ಭಾಗದಿಂದ ಸಂಚರಿಸುವ ಜನರಿಗೂ ಅನುಕೂಲವಾಗಲಿದೆ‌ ಎಂದು ಹೇಳಿದರು.

ತುಮಕೂರು ಜಿಲ್ಲೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜಿಲ್ಲೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಲು ಕನಿಷ್ಟ ಎರಡು ತಾಸು ಬೇಕಾಗುತ್ತಿದೆ. ಜಿಲ್ಲೆಯಲ್ಲಿ ಕಾರ್ಡಿಯಾಲಜಿ ಕೇಂದ್ರ ನಿರ್ಮಿಸುವುದರಿಂದ ಜಿಲ್ಲೆಯ ಜನರಿಗೆ ಮಾತ್ರವಲ್ಲದೇ ಶಿವಮೊಗ್ಗ, ಹಾಸನ, ಚಿತ್ರದುರ್ಗ ಮುಂತಾದ ಜಿಲ್ಲೆಗಳ‌ ಜನರಿಗೂ ಅನುಕೂಲವಾಗಲಿದೆ ಎಂದರು.

ಜಿಲ್ಲಾಸ್ಪತ್ರೆಯು ಹಳೇ ಕಲ್ಲಿನ ಕಟ್ಟಡವಾಗಿದೆ. ರೂ. 130 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಧುನಿಕ ಸೌಲಭ್ಯವುಳ್ಳ ಆಸ್ಪತ್ರೆಯನ್ನು ನಿರ್ಮಿಸಲಾಗುವುದು.. ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇತ್ತೀಚೆಗೆ ಜಿಲ್ಲೆಗೆ ಬಂದಿದ್ದಾಗ, ಕೊಡುಗೆ ನೀಡುವಂತೆ ಹೇಳಿದ್ದೆ. ಜಿಲ್ಲೆಯಲ್ಲಿ ಕಾರ್ಯನಿರತ ಮಹಿಳೆಯರಿಗಾಗಿ ರೂ. 50 ಕೋಟಿ ವಸತಿ ನಿಲಯ ನಿರ್ಮಿಸಲು ಒಪ್ಪಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯ ಆವರಣದೊಳಗೆ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು‌

ತುಮಕೂರು ಶೈಕ್ಷಿಣಿಕ ನಗರವಾಗಿದೆ. ಬಹುತೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪೂರಕವಾದ ಹಾಸ್ಟೆಲ್‌ ವ್ಯವಸ್ಥೆಗಳಿಲ್ಲ. ಈಗಿರುವ ಹಾಸ್ಟೆಲ್‌ಗಳು ಸಾಲುತ್ತಿಲ್ಲ. ಜಿಲ್ಲೆಯಲ್ಲಿ ರೂ. 50 ಕೋಟಿ ವೆಚ್ಚದಲ್ಲಿ 12 ನೂತನ ಹಾಸ್ಟೆಲ್ ನಿರ್ಮಿಸುತ್ತಿದ್ದೇವೆ. ಇದಕ್ಕೆ ಶೀಘ್ರದಲ್ಲಿ ಅಡಿಗಲ್ಲು ಹಾಕಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಮೂರು ಸಾವಿರಕ್ಕು ಹೆಚ್ಚು ಜನರು ಕೆಲಸ ಮಾಡಲಿದ್ದಾರೆ. ತುಮಕೂರು ಜಿಲ್ಲೆಯು ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಸವಲತ್ತು ನೀಡುವ ಅವಶ್ಯಕತೆ ಇದೆ. ನಮ್ಮ‌ ಸರ್ಕಾರವು ತುಮಕೂರು ಜಿಲ್ಲೆಯ ಪೂರಕ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ‌ ಎಂದು ಹೇಳಿದರು.

ತುಮಕೂರು ಮಹಾನಗರ ಪಾಲಿಕೆಯ ಕೇವಲ 6 ವಾರ್ಡ್‌ಗಳಿಗೆ ಮಾತ್ರ ಸ್ಮಾರ್ಟ್ ಸಿಟಿ ಯೋಜನೆ ನೀಡಲಾಗಿದೆ. 29 ವಾರ್ಡ್ ಬಾಕಿ ಉಳಿದಿವೆ. ಈ ವಾರ್ಡ್‌ಗಳಲ್ಲಿ ಏನೆಲ್ಲ ಕೆಲಸಗಳಾಗಬೇಕಿದೆ ಎಂಬುದನ್ನು ಗುರುತಿಸಿ, ಅಂದಾಜು ರೂ. 100 ಕೋಟಿ ಖರ್ಚು‌ ಮಾಡಲಾಗುತ್ತಿದೆ. ಗುಬ್ಬಿ ರಸ್ತೆಯಲ್ಲಿರುವ ಭೀಮಸಂದ್ರದ ಸೇತುವೆಯನ್ನು ಸಹ ಅಗಲೀಕರಣಗೊಳಿಸುವ ಕಾಮಗಾರಿಯನ್ನು ಸದ್ಯದಲ್ಲೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು‌.

ಯಾವುದೇ ಜಾತಿ, ಧರ್ಮಕ್ಕೆ ಸೇರಿದ ಬಡವರು ಬಡವರಾಗಿಯೇ ಉಳಿಯಬಾರದು. ಬಡತನ ರೇಖೆಗಿಂತ ಕೆಳಗಿರುವವರು ಬೇರೆ ಸಮುದಾಯದ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಎಂಬ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಲಾಗಿದೆ. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಉದ್ದೇಶವಿಲ್ಲ. ಗ್ಯಾರಂಟಿ ಯೋಜನೆ ಜಾರಿಯಿಂದ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ. ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕೆ ಮಾಡಲಾಗುತ್ತಿದೆ‌.‌ ಸರ್ಕಾರದ ಬಳಿ ಹಣವಿಲ್ಲದಿದ್ದರೆ ಇಷ್ಟೆಲ್ಲ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ,‌ ವಿಧಾನ ಪರಿಷತ್‌ನ ಮಾಜಿ  ಸದಸ್ಯ ಹುಲಿ ನಾಯ್ಕರ್,  ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಿಇಒ ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ,  ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ವೆಂಕಟ್, ಹಿರಿಯ ಪತ್ರಕರ್ತ ಎಸ್.ನಾಗಣ್ಣ ಅವರು ಉಪಸ್ಥಿತರಿದ್ದರು.

Share this post

Post Comment