ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿ ಟೀಮ್ ಇಂಡಿಯಾ: ಗೆದ್ದರೆ ಸೂಪರ್-8 ಟಿಕೆಟ್

ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿ ಟೀಮ್ ಇಂಡಿಯಾ: ಗೆದ್ದರೆ ಸೂಪರ್-8 ಟಿಕೆಟ್

ಬೌಲಿಂಗ್ ವಿಭಾಗದಲ್ಲಿ ತೋರಿದ ಪ್ರಚಂಡ ನಿರ್ವಹಣೆಯಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ರೋಚಕ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಸೂಪರ್-8 ಹಂತಕ್ಕೆ ಸನಿಹವಾಗಿದೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ನಡೆಯಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು ಎದುರಿಸಲಿದ್ದು, ಹ್ಯಾಟ್ರಿಕ್ ಗೆಲುವಿನೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ತವಕ ರೋಹಿತ್ ಶರ್ಮ ಬಳಗದ್ದಾಗಿದೆ.

ಭಾರತೀಯ ಮೂಲದ ಆಟಗಾರರಿಂದ ಕೂಡಿರುವ ಅಮೆರಿಕ ಮತ್ತೊಂದು ಆಘಾತಕಾರಿ ಲಿತಾಂಶ ನೀಡುವ ಹುಮ್ಮಸ್ಸಿನಲ್ಲಿದೆ. ನಾಸೌ ಕೌಂಟಿ ಕ್ರೀಡಾಂಗಣದಲ್ಲಿರುವ ಡ್ರಾಪ್ ಇನ್ ಪಿಚ್‌ನಲ್ಲಿ ಬ್ಯಾಟರ್‌ಗಳು ರನ್‌ಗಳಿಸಲು ಹರಸಾಹಸಪಡುತ್ತಿದ್ದು, ಟೀಮ್ ಇಂಡಿಯಾ ಈ ಅಂಗಣದಲ್ಲಿ ತನ್ನ ಕೊನೆಯ ಪಂದ್ಯ ಆಡಲಿದೆ. ಹಿಂದಿನ 2 ಪಂದ್ಯಗಳಲ್ಲಿ ಬ್ಯಾಟರ್‌ಗಳು ಕಷ್ಟಪಟ್ಟಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ. 17 ವರ್ಷಗಳ ಪ್ರಶಸ್ತಿ ಕೊರಗು ನೀಗಿಸಲು ಟೀಮ್ ಇಂಡಿಯಾಗೆ ಸೂಪರ್-8ರಲ್ಲಿ ನೈಜ ಪರೀಕ್ಷೆ ಎದುರಾಗುವ ಸಾಧ್ಯತೆಯಿದೆ. ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ರೋಹಿತ್ ಪಡೆ ಸುಲಭ ಗೆಲುವು ದಾಖಲಿಸಿದರೆ ಸೂಪರ್-8 ಹಂತಕ್ಕೇರಲಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್‌ನ ಸತತ 2 ಪಂದ್ಯಗಳಲ್ಲಿ ಒಂದಂಕಿ ಮೊತ್ತ ಪೇರಿಸಿದ್ದು, ಅನನುಭವಿ ಅಮೆರಿಕ ದಾಳಿ ಎದುರು ಲಯಕ್ಕೆ ಮರಳುವ ನಿರೀಕ್ಷೆ ಇದೆ. ಸೂರ್ಯಕುಮಾರ್ ಯಾದವ್ ಸಹ ನಿರೀಕ್ಷಿತ ನಿರ್ವಹಣೆ ತೋರುವಲ್ಲಿ ವೈಲ್ಯ ಕಂಡಿದ್ದಾರೆ. ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ, ಶಿವಂ ದುಬೆ ಸಹ ಲಯ ಕಳೆದುಕೊಂಡಿದ್ದಾರೆ. ಹಿಂದೆ ರಣಜಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲಿ ಜತೆಯಾಗಿ ಆಡಿದ ಆಟಗಾರರ ವಿರುದ್ಧವೇ ಸೂರ್ಯಕುಮಾರ್ ಆಡಲಿದ್ದಾರೆ.

ಸತತ 2 ಗೆಲುವು ದಾಖಲಿಸಿ ಆತ್ಮವಿಶ್ವಾಸವೃದ್ಧಿಸಿಕೊಂಡಿರುವ ಅಮೆರಿಕ ಸಹ ಸೂಪರ್-8 ರೇಸ್‌ನಲ್ಲಿದ್ದು, ಒಂದು ಜಯ ಅನಿವಾರ‌್ಯ ಎನಿಸಿದೆ. ಭಾರತ ತಂಡ ಪ್ರತಿನಿಧಿಸುವ ಅವಕಾಶ ವಂಚಿತ ಭಾರತೀಯ ಮೂಲದ ಆಟಗಾರರ ಬಲ ಹೊಂದಿರುವ ಅಮೆರಿಕಕ್ಕೆ ಆರನ್ ಜೋನ್ಸ್, ಕೋರಿ ಆಂಡರ್‌ಸನ್ ಶಕ್ತಿ ಹೆಚ್ಚಿಸಿದ್ದಾರೆ. 8 ಭಾರತೀಯರು, 2 ಪಾಕ್ ಹಾಗೂ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್‌ನ ತಲಾ ಓರ್ವ ಆಟಗಾರರನ್ನು ಹೊಂದಿರುವ ಅಮೆರಿಕ ಪೈಪೋಟಿ ನೀಡುವ ನಿರೀಕ್ಷೆ ಇದೆ.

Share this post

Post Comment