ನಾಲ್ಕು ದಶಕಗಳ ಬಳಿಕ ಒಡಿಶಾ ರಾಜ್ಯದ ಪುರಿಯ ಜಗನ್ನಾಥ ದೇವಸ್ಥಾನದ ರತ್ನ ಭಂಡಾರವನ್ನು ತೆರೆಯಲಾಗಿದೆ. ಈ ಭಂಡಾರದಲ್ಲಿ ರಾಜರುಗಳಿಂದ ಕಾಣಿಕೆಯಾಗಿ ಬಂದಿದ್ದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ಸಿಕ್ಕಿವೆ.
ಒಡಿಶಾದ ಚಾರಿತ್ರಿಕ ಪುರಿ ಜಗನ್ನಾಥ ದೇಗುಲದ ‘ರತ್ನ ಭಂಡಾರ’ದ ಬಾಗಿಲನ್ನು ನಾಲ್ಕು ದಶಕಗಳ ಬಳಿಕ ಮೊದಲ ಬಾರಿಗೆ ಭಾನುವಾರ ಜುಲೈ 14ತೆರೆಯಲಾಯಿತು.
ಒಡಿಶಾ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಮಾರ್ಗಸೂಚಿಯಂತೆ ಭಾನುವಾರ ಮಧ್ಯಾಹ್ನ 1.28ರ ಸುಮಾರಿಗೆ ದೇಗುಲದ ಪ್ರಮುಖ ಕೋಣೆಯಲ್ಲಿ ಸುರಕ್ಷಿತವಾಗಿ ಇಡಲಾಗಿದ್ದ ‘ರತ್ನ ಭಂಡಾರ’ದ ಬಾಗಿಲು ತೆರೆಯಲಾಯಿತು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಸ್ಥಾನ ಪ್ರವೇಶಿಸಿದ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು, ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳಂತೆ ಪೂಜೆ ನೆರವೇರಿಸಿದರು. ಬೀಗ ತೆರಯಲು ಅನುಮತಿ ನೀಡುವಂತೆ ಪ್ರಭು ಜಗನ್ನಾಥನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ರತ್ನ ಭಂಡಾರ ತೆರೆಯಲಾಯಿತು. ‘ಸರ್ಪ ಕಾವಲಿರುತ್ತದೆ’ ಎಂಬ ನಂಬಿಕೆ ಹಿನ್ನೆಲೆಯಲ್ಲಿಹಾವು ಹಿಡಿಯುವ ಎರಡು ತಂಡಗಳನ್ನೂ ಸನ್ನದ್ಧವಾಗಿ ಇರಿಸಲಾಗಿತ್ತು.
ಒಡಿಶಾ ಹೈಕೋರ್ಟ್ ನಿವೃತ್ತ ನ್ಯಾ.ಬಿಸ್ವನಾಥ್ ರಾತ್, ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿ ಮುಖ್ಯ ಆಡಳಿತಾಧಿಕಾರಿ ಅರವಿಂದ ಪಾಧಿ, ಎಎಸ್‌ಐ ಸೂಪರಿಂಟೆಂಡೆಂಟ್ ಡಿ.ಬಿ.ಗಡನಾಯಕ್ ಹಾಗೂ ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜರ ಪ್ರತಿನಿಧಿ ಸೇರಿದಂತೆ 11 ಜನರಿದ್ದ ಸಮಿತಿ ಸಮ್ಮುಖದಲ್ಲಿ ಭಂಡಾರವನ್ನು ತೆರೆಯಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
”ಪ್ರಭು ಜಗನ್ನಾಥರ ಇಚ್ಛೆಯಂತೆ, ಒಡಿಶಾ ಅಸ್ಮಿತೆಯೊಂದಿಗೆ ಒಡಿಯಾ ಸಮುದಾಯವನ್ನು ಮುನ್ನಡೆಸುವ ಪ್ರಯತ್ನ ಆರಂಭಿಸಲಾಗಿದೆ. ಮೊದಲಿಗೆ ಜಗನ್ನಾಥ ದೇಗುಲದ ನಾಲ್ಕು ದ್ವಾರಗಳನ್ನು ತೆರೆಯಲಾಯಿತು. ಪ್ರಭುವಿನ ಇಚ್ಛೆಯ ಮೇರೆಗೆ 46 ವರ್ಷಗಳ ಬಳಿಕ ಮಹತ್ತರ ಉದ್ದೇಶಕ್ಕಾಗಿ ‘ರತ್ನ ಭಂಡಾರ’ವನ್ನು ತೆರೆಯಲಾಗಿದೆ,” ಎಂದು ಮುಖ್ಯಮಂತ್ರಿ ಕಚೇರಿಯು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಒಡಿಶಾ ಸರಕಾರ ಹೊರಡಿಸಿದ್ದ ಮಾರ್ಗಸೂಚಿಯಂತೆ ರತ್ನ ಭಂಡಾರದ ಬಾಗಿಲು ತೆರೆಯಲಾಗಿದೆ. ಸಮಿತಿ ಸದಸ್ಯರ ಸಮ್ಮುಖದಲ್ಲಿ ಭಂಡಾರದಲ್ಲಿರುವ ಆಭರಣಗಳ ಮೌಲ್ಯಮೌಪನ ನಡೆಸಲಾಗುತ್ತದೆ. ಎಲ್ಲಾಪ್ರಕ್ರಿಯೆಗಳನ್ನು ಡಿಜಿಟಲ್ ದಾಖಲೆ ಮಾಡಲು ವಿಡಿಯೊ ರೆಕಾರ್ಡ್ ಮಾಡಲಾಗಿದೆ,” ಎಂದು ಜಗನ್ನಾಥ ಮಂದಿರದ ಆಡಳಿತಾಧಿಕಾರಿ ಅರವಿಂದ ಪಾ ಹೇಳಿದ್ದಾರೆ.
ಆಭರಣ ಪೆಟ್ಟಿಗೆಯು ಎರಡು ವಿಭಾಗಗಳನ್ನು ಒಳಗೊಂಡಿದೆ. ‘ ಹೊರ ಭಂಡಾರ ‘ ಎಂದು ಕರೆಯಲಾಗುವ ಭಾಗದಲ್ಲಿ ವಾರ್ಷಿಕ ರಥೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ಬಳಸುವ ಉಡುಪುಗಳು, ಆಭರಣಗಳಿವೆ. ‘ ಒಳ ಭಂಡಾರ ‘ ಎಂದು ಕರೆಯುವ ಮತ್ತೊಂದು ಭಾಗದಲ್ಲಿ ರಾಜರಿಂದ ಕಾಣಿಕೆಯಾಗಿ ಲಭಿಸಿದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳಿವೆ. ಕೊನೆಯ ಬಾರಿಗೆ 1978 ರಲ್ಲಿ ಒಳ ಭಂಡರವನ್ನು ತೆರೆಯಲಾಗಿತು