ರೈಲ್ವೇ ಮಾರ್ಗ ನಿರ್ಮಾಣ ಕುರಿತು ಶೀಘ್ರದಲ್ಲೇ ಕೇಂದ್ರ ಸಚಿವರೊಂದಿಗೆ ಸಭೆ
ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಹುಬ್ಬಳ್ಳಿ-ಅಂಕೋಲಾ ರೈಲ್ವೇ ಯೋಜನೆ ಹಾಗೂ ಬೆಂಗಳೂರು- ಹಾಸನ-ಮಂಗಳೂರು ನಡುವೆ ಜೋಡಿ ರೈಲ್ವೇ ಮಾರ್ಗ ನಿರ್ಮಾಣ ಕುರಿತು ಶೀಘ್ರದಲ್ಲೇ ಕೇಂದ್ರ ಸಚಿವರೊಂದಿಗೆ ಸಭೆ ಆಯೋಜಿಸಿ ಆಹ್ವಾನ ನೀಡುವುದಾಗಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ಗೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದಾರೆ.
ಬೆಂಗಳೂರು ಉಪನಗರ ರೈಲು ಯೋಜನೆ ಕುರಿತಂತೆ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಹಲವು ರೈಲ್ವೇ ಯೋಜನೆಗಳ ಕುರಿತು ಮನವಿ ಮಾಡಿದ ಸಚಿವ ಎಂ.ಬಿ. ಪಾಟೀಲ್, ಬಂದರು ನಗರಿಗೆ ರೈಲ್ವೇ ಸಂಪರ್ಕ ಕಲ್ಪಿಸುವುದರಿಂದ ಉತ್ತರ ಕರ್ನಾಟಕ ಭಾಗಕ್ಕೂ ಅನುಕೂಲ ಆಗಲಿದ್ದು, ಅದೇ ರೀತಿ ಉತ್ತರ ಕರ್ನಾಟಕ ಭಾಗದ ಹಲವೆಡೆ ರೈಲ್ವೇ ವಿಸ್ತರಣೆ ಆಗಬೇಕಿದೆ ಎಂದು ಕೇಳಿದ್ದಾರೆ.
ಹುಬ್ಬಳ್ಳಿ-ಅಂಕೊಲಾ ರೈಲ್ವೇ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯ ತೀರುವಳಿ ಅವಶ್ಯಕತೆ ಇದ್ದು, ಒಟ್ಟಾರೆ ರಾಜ್ಯದ ರೈಲ್ವೇ ಯೋಜನೆಗಳ ಕುರಿತಂತೆ ಸಮಾಲೋಚನೆ ಮಾಡಲು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಸಭೆ ಏರ್ಪಾಡು ಮಾಡುವುದಾಗಿ ಭರವಸೆ ಕೊಟ್ಟರು. ಅಷ್ಟೇ ಅಲ್ಲದೆ, ರಾಜ್ಯಕ್ಕೆ ಯಾವೆಲ್ಲ ಯೋಜನೆಗಳಿಗೆ ಎಷ್ಟೆಷ್ಟು ಖರ್ಚು ಮಾಡಲಾಗಿದೆ ಎಂಬುದರ ಶ್ವೇತಪತ್ರವನ್ನೂ ಬೇಕಿದ್ದರೆ ಹೊರಡಿಸೋಣ ಎಂದು ಸೋಮಣ್ಣ ಹೇಳಿದರು.