ಮುಡಾ ನಿವೇಶನ ಹಂಚಿಕೆ ಹಗರಣ ಆರೋಪ: ನಾನೇಕೆ ರಾಜೀನಾಮೆ ನೀಡಲಿ?; ಸಿಎಂ ಸಿದ್ದರಾಮಯ್ಯ

ಮುಡಾ ನಿವೇಶನ ಹಂಚಿಕೆ ಹಗರಣ ಆರೋಪ: ನಾನೇಕೆ ರಾಜೀನಾಮೆ ನೀಡಲಿ?; ಸಿಎಂ ಸಿದ್ದರಾಮಯ್ಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ನಿವೇಶನ ಹಂಚಿಕೆ ಹಗರಣ ಮತ್ತು ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಬಿಜೆಪಿ ನಾಯಕರ ಬೇಡಿಕೆಯನ್ನು ಸಿದ್ದರಾಮಯ್ಯ ಅವರು ಬುಧವಾರ ತಿರಸ್ಕರಿಸಿದ್ದಾರೆ.

ಮೈಸೂರಿನ ಮುಡಾ ಅವ್ಯವಹಾರವನ್ನು ಖಂಡಿಸಿ ಬುಧವಾರ ಬಿಜೆಪಿ ನಾಯಕರು ನಡೆಸಿದ ಪ್ರತಿಭಟನೆ ಕುರಿತು ಮಾತನಾಡಿದ ಅವರು, ತನಿಖೆ ಮುಗಿದು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ. ಹಂಚಿಕೆಯಾದ ನಿವೇಶನಗಳನ್ನು ಅಮಾನತ್ತಿನಲ್ಲಿ ಇಟ್ಟಿರುವುದರಿಂದ ಸರ್ಕಾರಕ್ಕೆ ಸದ್ಯ ಯಾವ ನಷ್ಟವೂ ಆಗಿಲ್ಲ. ಹಿಂದೆ ನಿವೇಶನ ಹಂಚಿದವರು ಬಿಜೆಪಿಯವರೇ ಆಗಿರುವುದರಿಂದ ಈಗವರು ನನ್ನ ರಾಜೀನಾಮೆ ಕೇಳುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗವಾಗಿದೆ ಎಂದು ಆರೋಪಿಸಿ, ಸಿಬಿಐ ಗೆ ಹಸ್ತಾಂತರಿಸಲು ಬಿಜೆಪಿ ಪಕ್ಷ ಒತ್ತಾಯಿಸುತ್ತಿದೆ. ಹಿಂದೆ ಅವರೇ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು? ಒಂದನ್ನೂ ಕೊಟ್ಟಿಲ್ಲ. ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಬಿಜೆಪಿಯೇ ಕಾನೂನು ಮಾಡಿದೆ. ಈಗ ಅವರೇ ಅದನ್ನು ಹಗರಣ ಎನ್ನುತ್ತಿದ್ದಾರೆ.

ವಾಲ್ಮೀಕಿ ನಿಗಮದ ಪ್ರಕರಣವನ್ನು ಎಸ್ಐಟಿಗೆ ವಹಿಸಲಾಗಿದ್ದು ತನಿಖೆ ನಡೆಯುತ್ತಿದೆ. ಸಚಿವರಾಗಿದ್ದ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಡೆತ್ ನೋಟ್ನಲ್ಲಿ ಮಂತ್ರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಮೌಖಿಕ ಆದೇಶ ನೀಡಿದ್ದರು ಎಂದು ಬರೆದಿರುವ ಕಾರಣ ರಾಜೀನಾಮೆ ಪಡೆದೆವು.

ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದೆ. ಈ ಹಗರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪತ್ತೆ ಹಚ್ಚುವ ಕಾರಣಕ್ಕಾಗಿಯೇ ಎಸ್ಐಟಿ ರಚನೆಯಾಗಿದೆ. ತನಿಖೆಯ ವರದಿ ಬರಬೇಕು. ಅವರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಬೇಕು. ಇದ್ಯಾವುದೂ ಇಲ್ಲದೇ ಕ್ರಮ ಕೈಗೊಳ್ಳುವುದು ಹೇಗೆ? ಎಂದು ಪ್ರಶ್ನಿಸಿದರು.

ಈ ನಡುವೆ ಚನ್ನಪಟ್ಟಣದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು.

Share this post

Post Comment