ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಓದಿರುವುದಿಲ್ಲ. ಈ ಬಗ್ಗೆ ನನಗೆ ಗ್ಯಾರಂಟಿ ಇದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದರು.
ದೇಶದ ಸಂವಿಧಾನವು ಪ್ರೀತಿ, ಏಕತೆ, ಸಮಾನತೆಯನ್ನು ಪ್ರತಿಪಾದಿಸಿದೆ.
ಎಲ್ಲ ಧರ್ಮೀಯರನ್ನು ಸಮಾನವಾಗಿ ನೋಡಿದೆ. ಅಲ್ಲಿ ದ್ವೇಷದ ಉಲ್ಲೇಖವಿಲ್ಲ. ಪ್ರಧಾನಿ ಸಂವಿಧಾನ ಓದಿದ್ದರೆ ಅಲ್ಲಿ ಬರೆದಿರುವುದನ್ನು ಗೌರವಿಸುತ್ತಿದ್ದರು’ ಎಂದು ರಾಹುಲ್ ಹೇಳಿದರು.
ಮಹಾರಾಷ್ಟ್ರದ ಗೋಂಧಿಯಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸಂವಿಧಾನದಿಂದಾಗಿ ಇಂದು ಪ್ರಜಾಪ್ರಭುತ್ವ ಉಳಿದಿದೆ. ಹಲವು ಸಂಸ್ಥೆಗಳು ಸ್ಥಾಪನೆ ಆಗಿವೆ. ಆದರೆ, ಮೋದಿ ಹಾಗೂ ಬಿಜೆಪಿ, ಆರ್‌ಎಸ್‌ಎಸ್ ಇವುಗಳ ಮೇಲೆ ದಾಳಿ ನಡೆಸುತ್ತಿವೆ’ ಎಂದು ಟೀಕಿಸಿದರು.
ಎನ್‌ಡಿಎ ವಿರುದ್ಧ ಹರಿಹಾಯ್ದ ಅವರು, ಇದು ಸಿದ್ಧಾಂತಗಳ ನಡುವಿನ ಹೋರಾಟ. ಸಂವಿಧಾನ ಉಳಿಸಲು ನಡೆಯುತ್ತಿರುವ ಹೋರಾಟ. ದ್ವೇಷವನ್ನು ಪ್ರೀತಿಯಿಂದ ಸೋಲಿಸಲು ನಡೆಯುತ್ತಿರುವ ಹೋರಾಟ ಎಂದರು. ಚುನಾಯಿತ ಸರ್ಕಾರಗಳನ್ನು ಪದಚ್ಯುತಗೊಳಿಸುವ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ನಾಶಪಡಿಸುತ್ತಿವೆ ಎಂದು ಆರೋಪಿಸಿದರು.