ನ್ಯೂಸ್ ಡೆಸ್ಕ್ ಉತ್ತರ ಕರ್ನಾಟಕ : ಸಮೀಪದ ಬದ್ದೇಪಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಬಾಲಕಿಯರು ಕಬಡ್ಡಿ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿ, ವಿಜೇತರಾಗುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕಿನ ಸೈದಾಪುರದಲ್ಲಿ ಆಯೋಜನೆ ಮಾಡಿದ್ದ ಸೈದಾಪುರ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಕ್ರೀಡಾಕೂಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದ ಬದ್ದೇಪಲ್ಲಿ ಶಾಲಾ ಬಾಲಕಿಯರು ಎದುರಾಳಿಗಳನ್ನು ನಿರಾಯಸವಾಗಿ ಮಣಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಇದಲ್ಲದೆ ಬಾಲಕಿಯರ ವಿಭಾಗದ ಖೋ-ಖೋ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆ ಕುರಿತು ಮಾತನಾಡಿದ ಪ್ರಭಾರಿ ಮುಖ್ಯಗುರು ರೂಪೇಶ ಕುಮಾರ ಅವರು ಪ್ರತಿಯೊಬ್ಬರಲ್ಲೂ ಯಾವುದಾರೂ ಒಂದು ಪ್ರತಿಭೆ ಇದ್ದೇ ಇರುತ್ತದೆ ಅಂತಹ ಪ್ರತಿಭೆಗಳನ್ನು ಗುರುತಿಸಿ ಪೋಷಿಸುವ ಕೆಲಸ ಶಿಕ್ಷಕರು ಮಾಡಬೇಕಾಗಿದೆ. ಶಿಕ್ಷಣ ಕೇವಲ ಅಕ್ಷರ ಜ್ಞಾನಕ್ಕೆ ಸೀಮಿತವಾಗದೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಆಟೋಟಗಳಲ್ಲೂ ಉತ್ತಮ ಸಾಧಕರನ್ನಾಗಿ ರೂಪಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಸಾಧನೆಯಲ್ಲಿ ಪೋಷಕ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಕಾರವೂ ಪ್ರಮುಖವಾಗಿದೆ ಎಂದು ತಿಳಿಸಿದರು.
ಮಕ್ಕಳ ಸಾಧನೆಗೆ ಶಿಕ್ಷಕರಾದ ಮಾಜೀದ್ ಅಲಿ, ಸಿದ್ದಪ್ಪ ಪೂಜಾರಿ, ದೈಹಿಕ ಶಿಕ್ಷಕ ಮೌನೇಶ ಸೇರಿದಂತೆ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿ, ಸದಸ್ಯರುಗಳ ಜತೆಗೆ ಪಾಲಕರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.