- ಗಮನ ಸೆಳೆದ ಚಿಣ್ಣರ ವಚನ ಕಂಠಪಾಠ ಸ್ಪರ್ಧೆ
- ವಚನ ಸಾಹಿತ್ಯದಂತಹ ದೊಡ್ಡ ಸಂಪತ್ತು ಮತ್ತೊಂದಿಲ್ಲ : ಶಿವಕುಮಾರ ಘಾಟೆ
- ಗಮನ ಸೆಳೆದ ಚಿಣ್ಣರ ವಚನ ಕಂಠಪಾಠ ಸ್ಪರ್ಧೆ
- ಮಕ್ಕಳಿಗೆ ವಚನಗಳನ್ನು ಕಲಿಸಿದರೆ ಬಸವಣ್ಣನವರಿಗೆ ಗೌರವ ಸಲ್ಲಿಸಿದಂತೆ : ಮುಕ್ತೆದಾರ್
ಔರಾದ : ವಚನ ಸಾಹಿತ್ಯದಂತಹ ದೊಡ್ಡ ಸಂಪತ್ತು ಮತ್ತೊಂದಿಲ್ಲ. ನಾವೆಲ್ಲರೂ ವಚನ ಸಾಹಿತ್ಯವನ್ನು ರಕ್ಷಿಸಿ, ಉಳಿಸಿ ಬೆಳೆಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು. ಪಟ್ಟಣದ ಅನುಭವ ಮಂಟಪದಲ್ಲಿ ಭಾನುವಾರ ಶ್ರಾವಣ ಮಾಸ ಮತ್ತು ಲಿಂ. ಶಾಂತಪ್ಪ ಘೂಳೆ ಅವರ ಸ್ಮರಣಾರ್ಥ ನಿಮಿತ್ತ ಹಮ್ಮಿಕೊಂಡ ವಚನಗಳ ಕಂಠಪಾಠ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಚನಗಳು ನಮ್ಮ ಬಾಳಿಗೆ ದಾರಿದೀಪ ಅನ್ನೋದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದರು.
ಅಕ್ಕಮಹಾದೇವಿ, ಬಸವಣ್ಣನವರು ಸೇರಿದಂತೆ ಇತರರ ಸರಳ ವಚನಗಳನ್ನು ಮಕ್ಕಳಿಗೆ ಪಾಲಕರು ಹೇಳಿಕೊಡಬೇಕು ಎಂದು ಸಲಹೆ ನೀಡಿದರು. ವಚನಗಳು ಬದುಕಿನ ನಿಷ್ಠೆ, ಸಂಸ್ಕಾರ ಮತ್ತು ಸಂಸ್ಕೃತಿ ಕಲಿತುಕೊಳ್ಳಲು ಅನುಕೂಲವಾಗಲಿದೆ ಎಂದರು.
ಬಸವಾದಿ ಶರಣರು ನೀಡಿರುವ ಅನುಭವದ ಅಮೃತ ಹೊಂದಿರುವ ವಚನಗಳನ್ನು ಕೇವಲ ಪಠಣ ಮಾಡಿದರಷ್ಟೇ ಸಾಲದು. ಬದಲಿಗೆ ಅವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ವಚನಗಳಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಮೌಡ್ಯತೆ, ಕಂದಾಚಾರ, ಭ್ರಷ್ಟಾಚಾರ, ಅಂಧ ಶ್ರದ್ಧೆಯಂತ ಅನಿಷ್ಠಗಳ ನಿರ್ಮೂಲನೆಗೆ ಸಹಾಯಕವಾಗಿವೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿ, ಪೋಷಕರು ಮಕ್ಕಳಿಗೆ ವಚನಗಳನ್ನು ಕಲಿಸಿದರೆ ಬಸವಣ್ಣನವರಿಗೆ ಗೌರವ ಸಲ್ಲಿಸಿದಂತೆ. ಕಾಯಕದ ಮಹತ್ವ ಸಾರಿದ ಬಸವಣ್ಣನವರ ಒಂದೊಂದು ವಚನಗಳೂ ಬದುಕಿನ ಪಾಠ ಹೇಳುತ್ತವೆ. ಹಾಗಾಗಿ ಇವುಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟಲ್ಲಿ ಸದ್ಗುಣಗಳು ಮೈಗೂಡುತ್ತವೆ ಎಂದು ತಿಳಿಸಿದರು.
ಆಯೋಜಕ ಚಂದ್ರಕಾಂತ ಘೂಳೆ, ಪಿಡಿಒ ಶರಣಪ್ಪ ನಾಗಲಗಿದ್ದೆ, ಶಿಕ್ಷಕ ಮಹಾದೇವ ಘೂಳೆ, ಅಮೃತರಾವ ಬಿರಾದರ್, ಜಗನ್ನಾಥ ಮೂಲಗೆ, ಶಿವಕುಮಾರ ಶಿವಪೂಜೆ ಸೇರಿದಂತೆ ಅನೇಕರಿದ್ದರು. ಶಿಕ್ಷಕ ಸತೀಶ ಮಜಿಗೆ ಸ್ವಾಗತಿಸಿ, ವಂದಿಸಿದರು.
ಗಮನ ಸೆಳೆದ ಚಿಣ್ಣರ ವಚನ ಕಂಠಪಾಠ ಸ್ಪರ್ಧೆ
ಮಕ್ಕಳಿಗಾಗಿ ಹಮ್ಮಿಕೊಂಡ ವಚನ ಕಂಠಪಾಠ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಎಲ್ ಕೆಜಿ, ಯುಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸನ್ಶ್ರಯ್ ಮೊಕ್ತೆದಾರ್ (ಪ್ರಥಮ), ಅಮಿತ್ ದಾಮಾ (ದ್ವಿತೀಯ) 1-5ನೇ ತರಗತಿವರೆಗೆ ಪ್ರೀತಿ ಬಸವರಾಜ (ಪ್ರಥಮ), ವೈಷ್ಣವಿ ಸಂಜೀವ, ಭದ್ರಿನಾಥ ಸಿದ್ದಪ್ಪ (ದ್ವಿತೀಯ), ಧೃತಿ ಭಾಸ್ಕರಿ, ತರಂಗಿಣಿ ಸಂತೋಷ (ತೃತೀಯ), 6-10 ನೇ ತರಗತಿವರೆಗೆ ಸಾಧನಾ ಬಾಬುರಾವ (ಪ್ರಥಮ), ಸಾಕ್ಷಿ ಶಿವಾನಂದ, ಸುಪ್ರಿಯಾ ಹಣಮಂತ (ದ್ವಿತೀಯ), ರುಜುತಾ ಸಂತೋಷ, ವಿಜಯಲಕ್ಷ್ಮಿ ಜಗನ್ನಾಥ ಮೂಲಗೆ (ತೃತೀಯ) ಸ್ಥಾನ ಪಡೆದಿದ್ದಾರೆ.
ವರದಿ:ಅಂಬಾದಾಸ ಉಪ್ಪಾರ ಔರಾದ